ಕೊಬ್ಬು, ಕೊಲೆಸ್ಟರಾಲ್ ಕುರಿತು ನೀವು ತಿಳಿದಿರುವುದು ಸತ್ಯವಲ್ಲ!
ದಿ ಸ್ಟೇಟ್ – ಇಲಾಜು (ಎಪ್ರಿಲ್ 16, 2018)
ಸಮೂಹ ಮಾಧ್ಯಮಗಳು ದುಡ್ಡಿದ್ದವರ, ಅಧಿಕಾರವಿದ್ದವರ ಪ್ರಭಾವಕ್ಕೊಳಗಾಗಿ, ಅನುಕೂಲವೆನಿಸಿದ್ದನ್ನು ಪ್ರಕಟಿಸುವುದು, ಇಲ್ಲದ್ದನ್ನು ಬಿಸುಕುವುದು, ಖಳರನ್ನು ಮಹಾಮಹಿಮರಾಗಿಸುವುದು, ಸುಳ್ಳುಗಳನ್ನು ತಿರುಚಿ ಸತ್ಯವಾಗಿಸುವುದು ನಿತ್ಯದ ಸಂಗತಿಗಳಾಗಿವೆ. ಸುಳ್ಳುಗಳನ್ನು ಹುದುಗಿಸಿ ಮತಿಭ್ರಮಣೆಗೊಳಪಡಿಸುವ ಇಂಥ ಕೆಲಸವನ್ನು ವೈದ್ಯಕೀಯ-ವೈಜ್ಞಾನಿಕ ಪ್ರಕಟಣೆಗಳೂ ಮಾಡುತ್ತಿರುತ್ತವೆ. ಇಪ್ಪತ್ತನೇ ಶತಮಾನದ ಮಧ್ಯದಿಂದ ವೈದ್ಯ ವಿಜ್ಞಾನದ ಸಂಶೋಧನೆಗಳಲ್ಲಿ ಖಾಸಗಿ ಸಂಸ್ಥೆಗಳ ಭಾಗೀದಾರಿಕೆ ಹೆಚ್ಚಿದಂತೆ ಸತ್ಯಗಳನ್ನು ಅಡಗಿಸಿಟ್ಟು, ಸುಳ್ಳುಗಳನ್ನೇ ಸತ್ಯಗಳೆಂದು ಬಿಂಬಿಸಿದ ಹಲವು ನಿದರ್ಶನಗಳು ಬಯಲಾಗಿವೆ.
ಬೊಜ್ಜು, ಮಧುಮೇಹ, ಹೃದ್ರೋಗ ಮುಂತಾದ ಆಧುನಿಕ ಕಾಯಿಲೆಗಳಿಗೆ ಕಾರಣಗಳೇನೆನ್ನುವ ಬಗ್ಗೆ 1950ರಿಂದ ಹಲವು ಅಧ್ಯಯನಗಳು ನಡೆದಿದ್ದವು. ಕೆಲವು ಸಕ್ಕರೆಯ ಅತಿ ಸೇವನೆಯಲ್ಲಿ ದೋಷವನ್ನು ಕಂಡರೆ, ಇನ್ನು ಕೆಲವು ಕೊಬ್ಬಿನ ಸೇವನೆಯನ್ನು ದೂಷಿಸಿದವು. ಆಹಾರೋದ್ಯಮದ ಒತ್ತಡದಿಂದಾಗಿ, ಸಕ್ಕರೆಯೇ ರೋಗಕಾರಕವೆಂದ ವರದಿಗಳಿಗೆ ಪ್ರಕಟಣೆಯ ಭಾಗ್ಯ ದೊರೆಯಲಿಲ್ಲ, ಆ ಅಧ್ಯಯನಗಳ ನೇತೃತ್ವ ವಹಿಸಿದ್ದ ವೈದ್ಯ ವಿಜ್ಞಾನಿಗಳೂ ಮೂಲೆ ಸೇರಬೇಕಾಯಿತು. ಅದಕ್ಕಿದಿರಾಗಿ, ಕೊಬ್ಬಿನಿಂದ ರೋಗಗಳುಂಟಾಗುತ್ತವೆ ಎಂದು ಸಾಧಿಸಿ, ಕೊಬ್ಬು ಸೇವನೆಯನ್ನು ಕಡಿತಗೊಳಿಸಬೇಕೆಂದು ವಾದಿಸಿದ್ದವರು ಪ್ರತಿಷ್ಠಿತ ಟೈಮ್ಸ್ ಪತ್ರಿಕೆಯೂ ಸೇರಿದಂತೆ ಎಲ್ಲೆಡೆ ರಾರಾಜಿಸಿದರು. ಅಮೆರಿಕಾದ ಸರಕಾರವೂ ಕೊಬ್ಬಿನಿಂದ ರೋಗವೆನ್ನುವ ವಾದಕ್ಕೆ ಬೆಂಬಲ ನೀಡಿತು, ಕೊಲೆಸ್ಟರಾಲ್ ಸೇವನೆಯನ್ನು ದಿನಕ್ಕೆ 300 ಮಿಗ್ರಾಂಗೆ ಮಿತಗೊಳಿಸಬೇಕೆಂದು ತನ್ನ ಆಹಾರ ಮಾರ್ಗದರ್ಶಿಯಲ್ಲಿ 1980ರಿಂದಲೂ ಹೇಳುತ್ತಲೇ ಬಂತು. ಇಂತಹ ಬೆಂಬಲದೊಂದಿಗೆ ಕಡಿಮೆ ಕೊಬ್ಬು-ಹೆಚ್ಚು ಸಕ್ಕರೆಯ ತಿನಿಸುಗಳನ್ನು ಸಿದ್ಧಪಡಿಸುವ ಉದ್ಯಮವು ವರ್ಷಕ್ಕೆ ನಾಲ್ಕು ಲಕ್ಷ ಕೋಟಿಗಳ ವಹಿವಾಟು ನಡೆಸುವಷ್ಟು ಬೆಳೆಯಿತು.
ನಂತರದ ವರ್ಷಗಳಲ್ಲಿ ಕೊಬ್ಬಿಗಿಂತ ಸಕ್ಕರೆಯೇ ದೊಡ್ಡ ವೈರಿ ಎನ್ನುವುದಕ್ಕೆ ಹಲವಾರು ಸಾಕ್ಷ್ಯಗಳು ದೊರೆತರೂ ಅವನ್ನೆಲ್ಲ ಮುಚ್ಚಿಡಲಾಯಿತು. ಮಕ್ಕಳಲ್ಲಿ ಬೊಜ್ಜುಂಟಾಗಲು ಸಕ್ಕರೆಯೇ ಕಾರಣವೆಂದು ಹೇಳಿದ 2002ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ವರದಿಯು ಕೂಡ ಸಕ್ಕರೆ ತಯಾರಕರ ಒತ್ತಡದಿಂದಾಗಿ ಬದಿಗೆ ಸರಿಯಿತು. ಅಮೆರಿಕಾ ಸರಕಾರದ ಆಹಾರ ಮಾರ್ಗದರ್ಶಿಯ 2015ರ ಕರಡಿನಲ್ಲಿ ಕೊಲೆಸ್ಟರಾಲ್ ಸೇವನೆಗೆ ಮಿತಿಯಿರಬೇಕಿಲ್ಲವೆಂದೂ, ಸಕ್ಕರೆಯ ಸೇವನೆಯೇ ಆಧುನಿಕ ರೋಗಗಳಿಗೆ ಕಾರಣವೆಂದೂ ಹೇಳಲಾಗಿತ್ತಾದರೂ, ಅಂತಿಮ ಪ್ರಕಟಣೆಯಲ್ಲಿ ಮತ್ತೆ ಕೊಲೆಸ್ಟರಾಲ್ಗೆ ಮಿತಿಯನ್ನು ಹೇರಿ, ಸಕ್ಕರೆಯ ಮೇಲಿನ ಆರೋಪವನ್ನು ತಗ್ಗಿಸಲಾಯಿತು.
ಯಾರ ವಾದಗಳ ಆಧಾರದಲ್ಲಿ ಈ ಆರು ದಶಕಗಳಲ್ಲಿ ಕೊಬ್ಬನ್ನು ದೂಷಿಸಿ ಸಕ್ಕರೆಯನ್ನು ತಿನ್ನಿಸಲಾಯಿತೋ, ಅವರೇ ನಡೆಸಿದ್ದ ಅಧ್ಯಯನಗಳಲ್ಲಿ ಕೊಬ್ಬನ್ನು ದೂಷಿಸುವುದಕ್ಕೆ ಪುರಾವೆ ದೊರೆತಿರಲಿಲ್ಲ ಎನ್ನುವುದನ್ನು ಅವರದೇ ಸಂಸ್ಥೆಯ ಸಂಶೋಧಕರು ಹೊರಗೆಳೆದು ಎಪ್ರಿಲ್ 2016ರಲ್ಲಿ ಬ್ರಿಟಿಷ್ ಮೆಡಿಕಲ್ ಜರ್ನಲ್ನಲ್ಲಿ ಪ್ರಕಟಿಸಿದರು. ಯಾವ ಅಮೆರಿಕದ ಹೃದ್ರೋಗ ತಜ್ಞರ ಸಮಿತಿಯು ಕೊಲೆಸ್ಟರಾಲ್ ಪ್ರಮಾಣವನ್ನಿಳಿಸಲು ಔಷಧಗಳನ್ನು ಸೇವಿಸಲು ಸೂಚಿಸಿತ್ತೋ, ಅದೇ ಸಮಿತಿಯು ನವಂಬರ್ 2013ರಲ್ಲಿ ಪ್ರಕಟಿಸಿದ ವರದಿಯಲ್ಲಿ ಅಂತಹಾ ಔಷಧಗಳನ್ನು ಮೊದಲಿನಂತೆ ಸೇವಿಸುವ ಅಗತ್ಯವಿಲ್ಲವೆಂದೂ, ಹಾಗೆ ಸೇವಿಸುವುದರಿಂದ ಹೃದಯಾಘಾತವೂ ಸೇರಿದಂತೆ ರಕ್ತನಾಳಗಳ ಕಾಯಿಲೆಯನ್ನು ತಡೆಯಬಹುದೆನ್ನುವುದಕ್ಕೆ ಸಾಕಷ್ಟು ಆಧಾರಗಳಿಲ್ಲವೆಂದೂ ಹೇಳಿತು. ಹಿಂದೆ ಹೇಳಿದ್ದ ಸುಳ್ಳುಗಳು ಹೀಗೆ ಬಯಲಾದರೂ ಕೂಡ, ಮಾಧ್ಯಮಗಳಲ್ಲಿ ಕೊಬ್ಬು ಮತ್ತು ಕೊಲೆಸ್ಟರಾಲಿನ ದೂಷಣೆಯು ಇನ್ನೂ ನಿಂತಿಲ್ಲ.
ಮಧುಮೇಹಕ್ಕೆ ಬಳಸುವ ಕೆಲವು ಮಾತ್ರೆಗಳು ಮತ್ತು ಕೃತಕ ಇನ್ಸುಲಿನ್, ಮೂಳೆಗಳಿಗೆಂದು ನೀಡತೊಡಗಿದ ಕ್ಯಾಲ್ಸಿಯಂ, ಮುಟ್ಟು ನಿಂತ ಬಳಿಕ ಮಹಿಳೆಯರಿಗೆ ನೀಡತೊಡಗಿದ ಇಸ್ಟ್ರೋಜನ್ ಮುಂತಾದ ಕೆಲವು ಔಷಧಗಳ ವಿಚಾರದಲ್ಲೂ ಹೀಗೆಯೇ ಪ್ರಯೋಜನಗಳನ್ನು ಉತ್ಪ್ರೇಕ್ಷಿಸಿ, ಅಡ್ಡ ಪರಿಣಾಮಗಳನ್ನು ಅಡಗಿಸಿಡುವ ಪ್ರಯತ್ನಗಳಾಗಿದ್ದವು. ಮೂಳೆಸವೆತವನ್ನು ತಡೆಯುವುದಕ್ಕಾಗಿ ಮುಟ್ಟು ನಿಂತ ಮಹಿಳೆಯರೆಲ್ಲರೂ ಇಸ್ಟ್ರೋಜನ್ ಮಾತ್ರೆಗಳನ್ನು ಸೇವಿಸಬೇಕೆಂದು ಹೇಳಿ, ಹೃದಯಾಘಾತ, ಪಾರ್ಶ್ವವಾಯು, ಅಲ್ಜೀಮರ್ಸ್ ಕಾಹಿಲೆ, ದಂತ ಕ್ಷಯ ಇತ್ಯಾದಿಗಳನ್ನು ತಡೆಯುವುದಕ್ಕೂ ಅದು ನೆರವಾಗುತ್ತದೆಂದು ಡಂಗುರ ಹೊಡೆದು, 1990ರಿಂದ 2000ದ ದಶಕದಲ್ಲಿ ಅದನ್ನು ಭರ್ಜರಿಯಾಗಿ ಮಾರಲಾಯಿತು. ಆದರೆ, ಇಸ್ಟ್ರೋಜನ್ ಬಳಕೆಯು ಮಹಿಳೆಯರನ್ನು ರಕ್ಷಿಸುವ ಬದಲಿಗೆ, ಸ್ತನದ ಕ್ಯಾನ್ಸರ್, ಹೃದಯಾಘಾತ, ಪಾರ್ಶ್ವವಾಯು ಹಾಗೂ ರಕ್ತ ಹೆಪ್ಪುಗಟ್ಟುವ ಸಮಸ್ಯೆಗಳನ್ನು ಶೇ. 26-41ರಷ್ಟು ಹೆಚ್ಚಿಸುತ್ತದೆ ಎಂದು ದೊಡ್ಡ ಅಧ್ಯಯನವೊಂದು ಗುರುತಿಸಿದ ಬೆನ್ನಿಗೆ, ಇಸ್ಟ್ರೋಜನ್ ಮಾರಾಟವೂ ಅರ್ಧಕ್ಕರ್ಧ ಇಳಿಯಿತು. ಇಸ್ಟ್ರೋಜನ್ ಅನ್ನು ಹೊಗಳಿ ವಿದ್ವತ್ ಪತ್ರಿಕೆಗಳಲ್ಲಿ ಬರೆದಿದ್ದ ಹಲವು ಲೇಖನಗಳು ಡಿಸೈನ್ ರೈಟ್ ಎಂಬ ಕಂಪೆನಿಯೇ ಸಿದ್ಧಪಡಿಸಿದ್ದ ಪ್ರೇತಬರಹಗಳಾಗಿದ್ದವೆನ್ನುವುದೂ ಬಯಲಾಯಿತು.
ವಿದ್ವತ್ ಪತ್ರಿಕೆಗಳು ಮಾತ್ರವಲ್ಲ, ವೈದ್ಯ ವಿಜ್ಞಾನದ ಪ್ರಮುಖ ಪಠ್ಯ ಪುಸ್ತಕಗಳ ಬರವಣಿಗೆಯಲ್ಲೂ ಹಣದ ಪ್ರಭಾವವಿರಬಹುದೆಂದು ಇದೇ ಫೆಬ್ರವರಿ 5ರಂದು ಅಮೆರಿಕನ್ ಜರ್ನಲ್ ಆಫ್ ಬಯೋ ಎಥಿಕ್ಸ್ನಲ್ಲಿ ಪ್ರಕಟವಾದ ಅಧ್ಯಯನವೊಂದು ಗುರುತಿಸಿದೆ. ವೈದ್ಯ ವಿಜ್ಞಾನದ ವಿದ್ಯಾರ್ಥಿಗಳು ಅತಿ ಹೆಚ್ಚು ಪಾಲಿಸುವ ಹಾರಿಸನ್ಸ್ ಪ್ರಿನ್ಸಿಪಲ್ಸ್ ಆಫ್ ಇಂಟರ್ನಲ್ ಮೆಡಿಸಿನ್ ಹಾಗೂ ಇನ್ನಿತರ ಐದು ಪ್ರಮುಖ ಪಠ್ಯ ಪುಸ್ತಕಗಳ ಒಟ್ಟು 1473 ಲೇಖಕರ ಹೆಸರಲ್ಲಿರುವ ಹಕ್ಕೋಲೆಗಳು ಮತ್ತು ಅವರಿಗೆ ಸಂದ ಸಂಭಾವನೆಗಳನ್ನು ಈ ಅಧ್ಯಯನದಲ್ಲಿ ಪರಿಶೀಲಿಸಲಾಗಿತ್ತು. ಈ ಪುಸ್ತಕಗಳಲ್ಲಿ ಒಟ್ಟು 772 ಅಧ್ಯಾಯಗಳನ್ನು ಬರೆದಿದ್ದ ಈ ಲೇಖಕರು ಬಗೆಬಗೆಯ ಚಿಕಿತ್ಸಾ ಕ್ರಮಗಳು ಹಾಗೂ ಔಷಧಗಳ ಒಟ್ಟು 677 ಹಕ್ಕೋಲೆಗಳನ್ನು ಹೊಂದಿದವರಾಗಿದ್ದರು, ಮತ್ತು 2009-14ರ ಅವಧಿಯಲ್ಲಿ ಒಬ್ಬರಿಗೆ ಗರಿಷ್ಠ 8.7 ಲಕ್ಷ ಡಾಲರ್ (ರೂಪಾಯಿ ಐದೂವರೆ ಕೋಟಿಗೂ ಹೆಚ್ಚು) ನಂತೆ ಔಷಧ ಹಾಗೂ ವೈದ್ಯಕೀಯ ಉಪಕರಣಗಳನ್ನು ತಯಾರಿಸುವ 17 ಕಂಪೆನಿಗಳಿಂದ ಒಟ್ಟು 20 ದಶಲಕ್ಷ ಡಾಲರ್ (ಸುಮಾರು 130 ಕೋಟಿ ರೂಪಾಯಿ) ಸಂಭಾವನೆಗಳನ್ನು ಪಡೆದಿದ್ದರು ಎಂದು ಈ ವರದಿಯಲ್ಲಿ ಹೇಳಲಾಗಿದೆ. ಮಾತ್ರವಲ್ಲ, ಯಾವ ಲೇಖಕನೂ ತಾನು ಪಡೆದ ಸಂಭಾವನೆಗಳ ಬಗ್ಗೆ, ಮತ್ತು ಹೊಂದಿರುವ ಹಕ್ಕೋಲೆಗಳ ಬಗ್ಗೆ, ಈ ಪಠ್ಯಪುಸ್ತಕಗಳಲ್ಲಿ ಘೋಷಿಸಿಕೊಂಡಿಲ್ಲ ಎನ್ನುವುದನ್ನೂ ವರದಿಯಲ್ಲಿ ಎತ್ತಿ ತೋರಿಸಲಾಗಿದೆ. ಹೆಚ್ಚಿನ ವಿದ್ವತ್ ಪತ್ರಿಕೆಗಳು ಹೀಗೆ ಹಿತಾಸಕ್ತಿಯ ಸಂಘರ್ಷಗಳನ್ನು ಘೋಷಿಸಿಕೊಳ್ಳುವುದನ್ನು ಇತ್ತೀಚಿನ ವರ್ಷಗಳಲ್ಲಿ ಕಡ್ಡಾಯಗೊಳಿಸಿದ್ದರೂ, ಪಠ್ಯಪುಸ್ತಕಗಳಲ್ಲಿ ಆ ಕ್ರಮವಿನ್ನೂ ಬಂದಿಲ್ಲ. ಹದಿನಾಲ್ಕು ಭಾಷೆಗಳಲ್ಲಿ, ಒಂದು ಕೋಟಿಗೂ ಹೆಚ್ಚು ಪ್ರತಿಗಳಾಗಿ ವೈದ್ಯ ವಿದ್ಯಾರ್ಥಿಗಳ ಮೇಲೆ ಬಹಳಷ್ಟು ಪ್ರಭಾವ ಬೀರುವ ಹಾರಿಸನ್ಸ್ನಂತಹ ಪಠ್ಯಗಳಲ್ಲಿ ಲೇಖಕರ ಹಿತಾಸಕ್ತಿ ಸಂಘರ್ಷಗಳ ಬಗ್ಗೆ ಘೋಷಣೆಗಳಿರಬೇಕೆನ್ನುವ ಬೇಡಿಕೆಯನ್ನು ಈ ಅಧ್ಯಯನವು ಗಟ್ಟಿಗೊಳಿಸಿದೆ. ಸಮೂಹ ಮಾಧ್ಯಮಗಳಿಗೂ ಇದೇ ನೀತಿ ಕಡ್ಡಾಯವಾಗಬಾರದೇಕೆ?
ಈ ವರದಿಯ ಬೆನ್ನಿಗೆ, ಮಾರ್ಚ್ 17ರಂದು, ನ್ಯೂಯಾರ್ಕ್ ಟೈಮ್ಸ್ನಲ್ಲಿ ಪ್ರಕಟಗೊಂಡ ವರದಿಯಲ್ಲಿ, ಮದ್ಯಪಾನದ ಪರಿಣಾಮಗಳ ಬಗ್ಗೆ ನಾಲ್ಕು ಖಂಡಗಳ 7000 ಜನರ ಮೇಲೆ ನಡೆಸಲಾಗುತ್ತಿರುವ 6 ವರ್ಷಗಳ ಅಧ್ಯಯನವೊಂದಕ್ಕೆ ಮದ್ಯ ತಯಾರಿಸುವ ದೊಡ್ಡ ಕಂಪೆನಿಗಳಿಂದ 10 ಕೋಟಿ ಡಾಲರ್ (650 ಕೋಟಿ ರೂಪಾಯಿ) ನೆರವನ್ನು ಪಡೆಯಲಾಗುತ್ತಿದೆ, ಮಾತ್ರವಲ್ಲ, ಈ ಅಧ್ಯಯನದ ವಿವರಗಳನ್ನೆಲ್ಲ ಆ ಕಂಪೆನಿಗಳಿಗೆ ಒದಗಿಸಲಾಗಿದೆ ಎನ್ನುವುದು ಬಯಲಾಗಿದೆ. ಮಿತವಾದ ಮದ್ಯಪಾನವು ಹೃದಯಾಘಾತದಿಂದ ರಕ್ಷಿಸುತ್ತದೆ ಎಂದು ಈ ಹಿಂದೆ ಹಲವು ವರದಿಗಳನ್ನು ಪ್ರಕಟಿಸಿದ್ದ ಹಾವರ್ಡ್ ವಿಶ್ವವಿದ್ಯಾಲಯದ ಕೆನೆತ್ ಮುಕಮಲ್ ಅವರೇ ಈ ಹೊಸ ಅಧ್ಯಯನದ ನೇತೃತ್ವ ವಹಿಸಿದ್ದಾರೆ, ಅದರಲ್ಲಿ ಭಾಗಿಗಳಾಗುವವರಿಗೆ ವಾರಕ್ಕೆ ಮೂರು ಸಲ ಕುಡಿಯುವುದಕ್ಕೆ ಬೇಕಾದಷ್ಟು ಮದ್ಯವನ್ನು ಕಂಪೆನಿಗಳೇ ಪೂರೈಕೆ ಮಾಡಲಿವೆ; ಹಾಗಿರುವಾಗ, ಆ ಅಧ್ಯಯನದ ಫಲಿತಾಂಶವು ಏನಿರಬಹುದೆಂದು ಊಹಿಸುವುದು ಕಷ್ಟವಲ್ಲ. ಒಂದಿಷ್ಟು ಮದ್ಯ ಸೇವಿಸುವವರಲ್ಲೂ ಮಿದುಳಿನ ಸಮಸ್ಯೆಗಳು ಮತ್ತು ಕೆಲವು ಕ್ಯಾನ್ಸರಿನ ಸಾಧ್ಯತೆಗಳು ಹೆಚ್ಚುತ್ತವೆ ಎನ್ನುವುದು ಈಗಾಗಲೇ ದೃಢಪಟ್ಟಿರುವಾಗ, ಮೂರೂವರೆ ಸಾವಿರ ಮಂದಿಗೆ ಕುಡಿಸಿ ಪರೀಕ್ಷಿಸುವುದರ ಔಚಿತ್ಯವೇನು?
ವಿಜ್ಞಾನ-ತಂತ್ರಜ್ಞಾನಗಳು ಅತಿಯಾಗಿ ನೆಚ್ಚಿಕೊಂಡಿರುವ ಸಾಕ್ಷ್ಯಾಧಾರಗಳನ್ನೇ ಬುಡಮೇಲು ಮಾಡಲು ಹಣ ಮತ್ತು ಅಧಿಕಾರವುಳ್ಳವರು ಪ್ರಯತ್ನಿಸುತ್ತಲೇ ಇರುತ್ತಾರೆ, ಆದರೆ, ಇವಕ್ಕೆಲ್ಲ ಬಗ್ಗದ ವಿಜ್ಞಾನಿಗಳು ಅಂತಹಾ ಹುನ್ನಾರಗಳನ್ನು ಬಯಲಿಗೆಳೆಯುತ್ತಲೇ ಇರುತ್ತಾರೆ. ಅಂತಹ ಛಲವೇ ವಿಜ್ಞಾನವನ್ನು ಬೆಳೆಸುತ್ತದೆ, ಸತ್ಯವನ್ನು ಇನ್ನಷ್ಟು ನಿಚ್ಚಳವಾಗಿಸುತ್ತದೆ.