ಆರೋಗ್ಯ ಆಶಯ – ವಿಜಯ ಕರ್ನಾಟಕ: ಎಗ್ಗಿಲ್ಲದೆ ಬೆಳೆಯುತ್ತಿರುವ ಕ್ಯಾನ್ಸರ್ [ಎಪ್ರಿಲ್ 30, 2014, ಬುಧವಾರ] [ನೋಡಿ | ನೋಡಿ]
ಹಸಿವು ಕ್ಯಾನ್ಸರನ್ನು ಕೊಲ್ಲುತ್ತದೆ, ಭೂರಿ ಭೋಜನ ಕ್ಯಾನ್ಸರನ್ನು ಸಲಹುತ್ತದೆ
ಆಧುನಿಕ ಆಹಾರ ಹಾಗೂ ಸುಲಭ-ಸುಖಮಯ ಜೀವನಶೈಲಿಯೊಂದಿಗೆ ನಿಕಟ ಸಂಬಂಧವನ್ನು ಹೊಂದಿರುವ ಹೃದ್ರೋಗ, ಮಧುಮೇಹ, ಪಾರ್ಶ್ವವಾಯು ಇತ್ಯಾದಿಗಳನ್ನು ನಿಯಂತ್ರಿಸಲು ನಾವು ಹೆಣಗಾಡುತ್ತಿರುವಾಗ ಕ್ಯಾನ್ಸರ್ ಇನ್ನೊಂದು ಪೆಡಂಭೂತವಾಗಿ ಬೆಳೆಯುತ್ತಿದೆ. ಹೊಸ ತಂತ್ರಜ್ಞಾನ ಹಾಗೂ ಚಿಕಿತ್ಸೆಗಳಿಂದ ಕ್ಯಾನ್ಸರನ್ನು ಶೀಘ್ರವಾಗಿ ಪತ್ತೆ ಹಚ್ಚುವುದಕ್ಕೂ, ಕೆಲವನ್ನು ಗುಣಪಡಿಸುವುದಕ್ಕೂ ಸಾಧ್ಯವಾಗಿದೆ. ಆದರೂ ಕ್ಯಾನ್ಸರ್ ಅಂದರೆ ಭಯವೂ ಹೆಚ್ಚು, ವೆಚ್ಚವೂ ಹೆಚ್ಚು.
ಪ್ರತಿಷ್ಠಿತ ಲಾನ್ಸೆಟ್ ವಿದ್ವತ್ಪತ್ರಿಕೆಯ ಎಪ್ರಿಲ್ 11 ರ ಸಂಚಿಕೆಯಲ್ಲಿ ಭಾರತ, ಚೀನಾ ಹಾಗೂ ರಷ್ಯಾಗಳಲ್ಲಿ ಕ್ಯಾನ್ಸರ್ ನಿಯಂತ್ರಣದ ಬಗ್ಗೆ 50 ಪುಟಗಳ ವರದಿಯಿದೆ. ಈ ದೇಶಗಳಲ್ಲಿ ಬೆಳೆಯುತ್ತಿರುವ ಆರ್ಥಿಕತೆ, ಆಧುನಿಕ ಜೀವನಶೈಲಿಯ ಹುಚ್ಚು, ಪರಿಸರ ಮಾಲಿನ್ಯ ಇತ್ಯಾದಿಗಳು ಕ್ಯಾನ್ಸರ್ ಹೆಚ್ಚಳಕ್ಕೆ ಕಾರಣವಾಗುತ್ತಿವೆಯೆಂದೂ, ಅಲ್ಲಿನ ಜನರಲ್ಲಿರುವ ವಿರಕ್ತಿ, ಜುಗುಪ್ಸೆ, ಆಧುನಿಕ ಚಿಕಿತ್ಸೆಯ ಬಗ್ಗೆ ಅವಿಶ್ವಾಸ, ಸಾಮಾಜಿಕ ಕಟ್ಟುಪಾಡುಗಳು, ಜಾತಿ, ಮತ, ಲಿಂಗಾಧಾರಿತ ಅಸಮಾನತೆಗಳು, ಬಡತನ, ಅಜ್ಞಾನ, ಮೂಢನಂಬಿಕೆ, ಸೌಲಭ್ಯಗಳ ಕೊರತೆ ಇತ್ಯಾದಿಗಳು ಕ್ಯಾನ್ಸರ್ ಪತ್ತೆ ಹಾಗೂ ಚಿಕಿತ್ಸೆಗಳಲ್ಲಿ ನಿರ್ಲಕ್ಷ್ಯಕ್ಕೂ, ಲೋಪಗಳಿಗೂ ಕಾರಣವಾಗುತ್ತಿವೆಯೆಂದೂ ಆ ವರದಿಯಲ್ಲಿ ಹೇಳಲಾಗಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಗ್ಲೋಬೋಕಾನ್ ವರದಿಯನುಸಾರ, 2012ರಲ್ಲಿ ವಿಶ್ವದಲ್ಲಿದ್ದ ಒಟ್ಟು ಕ್ಯಾನ್ಸರ್ ಪೀಡಿತರ ಸಂಖ್ಯೆ 3.26 ಕೋಟಿ, ಅದೇ ವರ್ಷ ಹೊಸದಾಗಿ ಕ್ಯಾನ್ಸರ್ ಪತ್ತೆಯಾದವರ ಸಂಖ್ಯೆ 1.41 ಕೋಟಿ, ಅದರಿಂದಾಗಿ ಸಾವನ್ನಪ್ಪಿದವರು 82 ಲಕ್ಷ. ಹೊಸದಾಗಿ ಕ್ಯಾನ್ಸರಿಗೆ ತುತ್ತಾಗುವವರ ಸಂಖ್ಯೆಯು 2025ರಲ್ಲಿ 1.9 ಕೋಟಿಗೆ, 2035ರಲ್ಲಿ 2.4 ಕೋಟಿಗೆ ಏರಲಿವೆ ಎನ್ನುವುದು ಗ್ಲೋಬೋಕಾನ್ ಅಂದಾಜು.
ಭಾರತದಲ್ಲೀಗ ಕ್ಯಾನ್ಸರ್ ಪೀಡಿತರ ಸಂಖ್ಯೆ ಸುಮಾರು 25 ಲಕ್ಷ, ಹೊಸದಾಗಿ ಕ್ಯಾನ್ಸರ್ ಪತ್ತೆಯಾಗುತ್ತಿರುವವರು ವರ್ಷಕ್ಕೆ 10 ಲಕ್ಷ, ಹಾಗೂ ಸಾವನ್ನಪ್ಪುವವರು ವರ್ಷಕ್ಕೆ ಮೂರೂವರೆ ಲಕ್ಷ. ಬೆಂಗಳೂರಿನ ಕಿದ್ವಾಯಿ ಗಂತಿ ಸಂಸ್ಥೆಯನುಸಾರ, ಕರ್ನಾಟಕದಲ್ಲಿ ಕ್ಯಾನ್ಸರ್ ಪೀಡಿತರು ಸುಮಾರು ಒಂದೂವರೆ ಲಕ್ಷ, ಪ್ರತೀ ವರ್ಷ ಹೊಸದಾಗಿ ಸೇರ್ಪಡೆಯಾಗುತ್ತಿರುವವರು 35 ಸಾವಿರದಷ್ಟು. ಅಮೆರಿಕಾ-ಬ್ರಿಟನ್ ಗಳಲ್ಲಿ ಮೂವರಿಂದ ನಾಲ್ವರಲ್ಲೊಬ್ಬರಿಗೆ ಕ್ಯಾನ್ಸರ್ ತಗಲುವ ಸಾಧ್ಯತೆಗಳಿದ್ದರೆ, ನಮ್ಮ ದೇಶದಲ್ಲಿ ಹತ್ತರಲ್ಲೊಬ್ಬರಿಗಿದೆ, ಬೆಂಗಳೂರಿನಲ್ಲಿ ಆರರಲ್ಲೊಬ್ಬರಿಗಿದೆ. ಅಮೆರಿಕಾ-ಬ್ರಿಟನ್ ಗಳಲ್ಲಿ ಶೇ.33-40ರಷ್ಟು ಕ್ಯಾನ್ಸರ್ ಪೀಡಿತರು ಸಾವನ್ನಪ್ಪಿದರೆ, ನಮ್ಮಲ್ಲಿ ಶೇ. 70ರಷ್ಟು ಸಾಯುತ್ತಾರೆ. ಅಂದರೆ, ನಮ್ಮಲ್ಲಿ ಕ್ಯಾನ್ಸರ್ ಉಂಟಾಗುವ ಅಪಾಯವು ಅಮೆರಿಕಾಕ್ಕಿಂತ ಕಡಿಮೆಯಿದ್ದರೂ, ಅದರಿಂದ ಸಾವನ್ನಪ್ಪುವ ಸಾಧ್ಯತೆಗಳು ಹೆಚ್ಚಿರುತ್ತವೆ. ನಮ್ಮಲ್ಲಿ ಕ್ಯಾನ್ಸರ್ ಪ್ರಕರಣಗಳು ನಗರವಾಸಿಗಳಲ್ಲಿ ಹೆಚ್ಚು ಪತ್ತೆಯಾಗುತ್ತಿದ್ದರೂ, ಅದರಿಂದಾಗುವ ಸಾವುಗಳ ಪ್ರಮಾಣವು ಹಳ್ಳಿಗಳಲ್ಲೇ ಹೆಚ್ಚು.
ನಮ್ಮ ಗಂಡಸರಲ್ಲಿ ಗಂಟಲು, ಬಾಯಿ, ಅನ್ನನಾಳ, ಜಠರ, ಶ್ವಾಸಕೋಶ ಹಾಗೂ ರಕ್ತದ ಕ್ಯಾನ್ಸರ್ ಗಳು ಹೆಚ್ಚು ಸಾಮಾನ್ಯವಾಗಿದ್ದರೆ, ಹೆಂಗಸರಲ್ಲಿ ಗರ್ಭನಾಳ, ಸ್ತನ, ಬಾಯಿ, ಅನ್ನನಾಳ ಹಾಗೂ ಅಂಡಾಶಯ ಕ್ಯಾನ್ಸರ್ ಗಳು ಹೆಚ್ಚಾಗಿ ಕಂಡುಬರುತ್ತವೆ. ಕ್ಯಾನ್ಸರ್ ಪೀಡಿತ ಗಂಡಸರಲ್ಲಿ ಅರ್ಧಕ್ಕೂ ಹೆಚ್ಚು ಸಾವುಗಳು ಬಾಯಿ ಹಾಗೂ ಶ್ವಾಸಕೋಶಗಳ ಕ್ಯಾನ್ಸರಿಗೆ ಸಂಬಂಧಿಸಿದ್ದರೆ, ಹೆಂಗಸರಲ್ಲಿ ಸ್ತನ ಹಾಗೂ ಗರ್ಭನಾಳದ ಕ್ಯಾನ್ಸರಿನಿಂದಾಗುತ್ತವೆ.
ಕ್ಯಾನ್ಸರ್ ಹೇಗುಂಟಾಗುತ್ತದೆ ಎನ್ನುವುದಕ್ಕೆ ಇನ್ನೂ ಖಚಿತವಾದ ಉತ್ತರವಿಲ್ಲ. ನಮ್ಮ ದೇಹದಲ್ಲಿ ಹತ್ತು ಲಕ್ಷ ಕೋಟಿ ಜೀವಕೋಶಗಳು ಸುನಿಯಂತ್ರಿತವಾಗಿ ಬಾಳುತ್ತಿರುತ್ತವೆ. ಕೆಲವು ಜೀವಕಣಗಳು ಸಹಜವಾಗಿ ಸವೆದು ಸಾಯುವುದು, ಅವುಗಳಿದ್ದಲ್ಲಿ ಹೊಸ ಕಣಗಳು ಹುಟ್ಟುವುದು, ಹಾನಿಯಾದ ಜೀವಕಣಗಳನ್ನು ಸರಿಪಡಿಸುವುದು ಅಥವಾ ಕೆಟ್ಟ ಕಣಗಳನ್ನು ನಾಶಪಡಿಸುವುದು ಎಲ್ಲವೂ ಸುಸಂಯೋಜಿತವಾಗಿ ನಡೆಯುತ್ತಿರುತ್ತವೆ. ನಾವು ಸೇವಿಸುವ ನೀರು ಮತ್ತು ಆಹಾರ, ಉಸಿರಾಡುವ ಗಾಳಿ, ನಮ್ಮ ದಿನನಿತ್ಯದ ಚಟುವಟಿಕೆಗಳು, ನಮ್ಮ ಪರಿಸರ ಮುಂತಾದ ಭೌತಿಕ-ರಾಸಾಯನಿಕ-ಜೈವಿಕ ಕಾರಣಗಳಿಂದ ಈ ಅತಿ ಸಂಕೀರ್ಣವಾದ ವ್ಯವಸ್ಥೆಯಲ್ಲಿ ಏರುಪೇರುಗಳಾದರೆ ಕ್ಯಾನ್ಸರ್ ಕಣಗಳು ಹುಟ್ಟಬಹುದು.
ಹಾಗೆ ಹುಟ್ಟಿದ ಕ್ಯಾನ್ಸರ್ ಕಣಗಳು ಅನಿಯಂತ್ರಿತವಾಗಿ ವೃದ್ಧಿಸುತ್ತವೆ. ಸಾಮಾನ್ಯ ಜೀವಕಣಗಳ ಬೆಳವಣಿಗೆಯನ್ನು ನಿಯಂತ್ರಿಸುವ, ಕೆಟ್ಟಕಣಗಳನ್ನು ನಾಶಗೊಳಿಸುವ ವ್ಯವಸ್ಥೆಗಳು ಕ್ಯಾನ್ಸರ್ ಕಣಗಳನ್ನು ತಟ್ಟುವುದಿಲ್ಲ. ರೋಗರಕ್ಷಣಾ ವ್ಯವಸ್ಥೆಯೂ ಅವಕ್ಕೆ ಶರಣಾಗುತ್ತದೆ. ರಕ್ತನಾಳಗಳನ್ನೂ ಸೃಷ್ಟಿಸಿಕೊಂಡು ಬೆಳೆಯುತ್ತಲೇ ಸಾಗುವ ಕ್ಯಾನ್ಸರ್ ಕಣಗಳು, ತಾವಿದ್ದಲ್ಲಿಂದ ಕಳಚಿಕೊಂಡು ಬೇರೆ ಅಂಗಗಳಿಗೂ ಹರಡಿ, ಅಲ್ಲೂ ತಳವೂರಿ ಬೆಳೆಯುತ್ತವೆ.
ನಮ್ಮ ದೇಶದಲ್ಲಿ ಶೇ. 40ಕ್ಕೂ ಹೆಚ್ಚು ಕ್ಯಾನ್ಸರ್ ಪ್ರಕರಣಗಳು ತಂಬಾಕು ಸೇವಿಸುವವರಲ್ಲೇ ಉಂಟಾಗುತ್ತವೆ. ಅದನ್ನು ಬಾಯೊಳಗಿಟ್ಟುಕೊಳ್ಳುವವರ ಬಾಯಿಗಳಲ್ಲಿ, ಜಗಿದು ನುಂಗುವವರ ಗಂಟಲು-ಅನ್ನನಾಳ-ಜಠರಗಳಲ್ಲಿ, ಬೀಡಿ-ಸಿಗರೇಟುಗಳ ಮೂಲಕ ಅದರ ಹೊಗೆಯನ್ನು ಸೇದುವವರ ಶ್ವಾಸನಾಳಗಳಲ್ಲಿ ಕ್ಯಾನ್ಸರುಗಳು ಹುಟ್ಟುತ್ತವೆ. ತಂಬಾಕಿನ ಹೂಕಾ, ಉಪ್ಪುಭರಿತ ಚಹಾ, ಒಣಹಣ್ಣುಗಳನ್ನು ಹೆಚ್ಚಾಗಿ ಸೇವಿಸುವ ಕಾಶ್ಮೀರದಲ್ಲಿ ಅನ್ನನಾಳದ ಕ್ಯಾನ್ಸರ್; ತಂಬಾಕಿನ ಹೊಗೆಮಿಶ್ರಿತ ನೀರನ್ನೂ, ಸಿಗರೇಟನ್ನೂ ಬಳಸುವ ಮಿಜೋರಾಂನಲ್ಲಿ ನಾಲಗೆ ಹಾಗೂ ಜಠರದ ಕ್ಯಾನ್ಸರ್; ತಂಬಾಕು ಮಿಶ್ರಿತ ಬೀಡಾ-ಬೀಡಿಗಳನ್ನು ಹೆಚ್ಚಾಗಿ ಬಳಸುವ ಕೇರಳದಲ್ಲಿ ಬಾಯಿಯ ಕ್ಯಾನ್ಸರ್; ಮೂಗಿನೊಳಕ್ಕೆ ನಾಟಿಮದ್ದನ್ನು ತೂರಿಸಿಡುವ ನಾಗಾಲ್ಯಾಂಡಿನಲ್ಲಿ ಮೂಗಿನೊಳಗಿನ ಕ್ಯಾನ್ಸರ್; ಆಧುನಿಕ ಜೀವನಶೈಲಿಯ ಜೊತೆಗೆ ಕರಿದ ಪದಾರ್ಥಗಳನ್ನೂ, ತಂಬಾಕನ್ನೂ ಅಧಿಕವಾಗಿ ಬಳಸುವ ದಿಲ್ಲಿಯಲ್ಲಿ ಪಿತ್ತಕೋಶದ ಕ್ಯಾನ್ಸರ್ – ಹೀಗೆ ವಿವಿಧೆಡೆ ವಿವಿಧ ಕಾರಣಗಳಿಂದ ಕ್ಯಾನ್ಸರ್ ಉಂಟಾಗಬಹುದು. ಪಂಜಾಬಿನ ಮಾಲ್ವಾ ಪ್ರದೇಶವು ದೇಶದಲ್ಲೇ ಅತಿ ಹೆಚ್ಚು ಕ್ಯಾನ್ಸರ್ ಪೀಡಿತರನ್ನು ಹೊಂದಿರುವ ಕುಖ್ಯಾತಿಗೊಳಗಾಗಿದೆ. ಅಲ್ಲಿನ ಬೃಹತ್ ಉದ್ದಿಮೆಗಳು, ಕಲ್ಲಿದ್ದಲು ಆಧಾರಿತ ವಿದ್ಯುತ್ ಘಟಕಗಳು ಹಾಗೂ ಆಧುನಿಕ ಕೃಷಿಪದ್ಧತಿಗಳಿಂದಾಗಿ ನೆಲ-ಜಲ-ಗಾಳಿಗಳೆಲ್ಲವೂ ವಿಕಿರಣಕಾರಿ ಯುರೇನಿಯಂ, ಆರ್ಸೆನಿಕ್,ಬಗೆಬಗೆಯ ಕೀಟನಾಶಕಗಳಿಂದ ತುಂಬಿರುವುದೇ ಇದಕ್ಕೆ ಕಾರಣವೆನ್ನಲಾಗಿದೆ.
ಇಂತಹಾ ಕ್ಯಾನ್ಸರ್ ಕಾರಕಗಳಿಂದ ಜೀವಕಣಗಳ ವಂಶವಾಹಿಗಳು ಹಾನಿಗೊಂಡು ಕ್ಯಾನ್ಸರ್ ಹುಟ್ಟುತ್ತದೆಯೆಂದು ಹೇಳಲಾಗುತ್ತಿತ್ತು. ಆದರೆ ಕಳೆದ ಹತ್ತು ವರ್ಷಗಳಿಂದ ಅಂತಹ ವಂಶವಾಹಿಗಳಿಗಾಗಿ ಭಾರೀ ಹುಡುಕಾಟವೇ ನಡೆದಿದ್ದರೂ ನಿರೀಕ್ಷಿತ ಫಲ ದೊರೆತಿಲ್ಲ; ಆದ್ದರಿಂದ ಈ ಸಿದ್ಧಾಂತವನ್ನೇ ಈಗ ಪ್ರಶ್ನಿಸುವಂತಾಗಿದೆ.
ಎಲ್ಲಾ ಕ್ಯಾನ್ಸರ್ ಕಣಗಳು ಗ್ಲೂಕೋಸನ್ನು ವಿಪರೀತ ಪ್ರಮಾಣದಲ್ಲಿ ವಿಶೇಷ ರೀತಿಯಿಂದ ಬಳಸಿಕೊಳ್ಳುತ್ತವೆ ಎನ್ನುವುದನ್ನು 1930ರಷ್ಟು ಹಿಂದೆಯೇ ಜರ್ಮನಿಯ ವಿಜ್ಞಾನಿ ಒಟೊ ವಾರ್ಬರ್ಗ್ ತೋರಿಸಿದ್ದರು, ಅದಕ್ಕಾಗಿ ನೊಬೆಲ್ ಪ್ರಶಸ್ತಿಯನ್ನೂ ಪಡೆದಿದ್ದರು. ಈಗ ವಾರ್ಬರ್ಗ್ ಸಿದ್ಧಾಂತದತ್ತ ಮತ್ತೆ ಆಸಕ್ತಿ ಹೊರಳಿದ್ದು, ಸಕ್ಕರೆ ಭರಿತ ಆಹಾರದ ವಿಪರೀತ ಸೇವನೆಯು ಗ್ಲೂಕೋಸ್ ಪ್ರಿಯ ಕ್ಯಾನ್ಸರನ್ನು ಹುಟ್ಟಿಸಿ, ಬೆಳೆಸುತ್ತದೆಯೇ ಎನ್ನುವ ಬಗ್ಗೆ ಅಧ್ಯಯನಗಳಾಗುತ್ತಿವೆ. ಸಕ್ಕರೆ ಹಾಗೂ ಸಂಸ್ಕರಿತ ಶರ್ಕರಗಳ ಸೇವನೆಯು ಜೀವಕಣಗಳಲ್ಲಿ ಉತ್ಕರ್ಷಕ ಒತ್ತಡವನ್ನು ಹೆಚ್ಚಿಸಿ, ಶಕ್ತ್ಯುತ್ಪಾದನೆಯ ಕೇಂದ್ರಗಳಾಗಿರುವ ಮೈಟೋಕಾಂಡ್ರಿಯಾಗಳನ್ನು ಹಾನಿಗೊಳಿಸಿ ಕ್ಯಾನ್ಸರ್ ಹುಟ್ಟಿಗೆ ಕಾರಣವಾಗಬಹುದೆಂದು ಹೇಳಲಾಗುತ್ತಿದೆ. ಮೇಲೆ ಹೇಳಲಾಗಿರುವ ಕ್ಯಾನ್ಸರ್ ಕಾರಕಗಳು ಕೂಡಾ ಮೈಟೋಕಾಂಡ್ರಿಯಾಗಳನ್ನು ಹಾನಿಗೊಳಿಸುತ್ತವೆಯೆಂದೂ, ಆ ಮೂಲಕ ವಂಶವಾಹಿಗಳಲ್ಲಿ ಬದಲಾವಣೆಗಳಿಗೆ ಕಾರಣವಾಗುತ್ತವೆ ಎಂದೂ ಹೇಳಲಾಗುತ್ತಿದೆ. ಊಟವಿಲ್ಲದೆ ಹಸಿದಿರುವಾಗ ಕೆಟ್ಟಕಣಗಳೆಲ್ಲ ಭಕ್ಷಿಸಲ್ಪಟ್ಟು, ಕ್ಯಾನ್ಸರ್ ಕಣಗಳು ಕೂಡ ನಾಶವಾಗುತ್ತವೆ; ಆದರೆ ನಿತ್ಯದ ಭೂರಿ ಭೋಜನವು ಕ್ಯಾನ್ಸರ್ ಕಣಗಳಿಗೆ ಪೋಷಣೆಯೊದಗಿಸುತ್ತದೆ ಎನ್ನಲಾಗುತ್ತಿದೆ. ಅದಾಗಲೇ ಕ್ಯಾನ್ಸರ್ ಪೀಡಿತರಾದವರಿಗೆ ತಜ್ಞ ಚಿಕಿತ್ಸೆಯ ಜೊತೆಗೆ ಸಕ್ಕರೆರಹಿತವಾದ ಆಹಾರಸೇವನೆಯು ಕ್ಯಾನ್ಸರ್ ಗುಣಪಡಿಸುವಲ್ಲಿ ನೆರವಾಗುತ್ತದೆನ್ನುವ ವರದಿಗಳೂ ಹಲವಿವೆ.
ಆದ್ದರಿಂದ ಕ್ಯಾನ್ಸರ್ ಮಾರಿಯನ್ನು ದೂರವಿಡಬೇಕಾದರೆ ಸಕ್ಕರೆ ಹಾಗೂ ಸಂಸ್ಕರಿತ ಆಹಾರಗಳನ್ನು, ಪಶು ಹಾಲಿನ ಉತ್ಪನ್ನಗಳನ್ನು, ಕರಿದ ತಿನಿಸುಗಳನ್ನು, ಅತಿಯಾಗಿ ಸುಟ್ಟ ಮಾಂಸವನ್ನು, ತಂಬಾಕು ಹಾಗೂ ಶರಾಬುಗಳನ್ನು ವರ್ಜಿಸಬೇಕು, ಪರಿಸರ ಮಾಲಿನ್ಯವನ್ನು ತಡೆಯಬೇಕು. ಪ್ರಕೃತಿದತ್ತ ಆಹಾರದ ಹಿತಮಿತವಾದ ಸೇವನೆ ಹಾಗೂ ನಿಯತ ವ್ಯಾಯಾಮಗಳು ಎಲ್ಲಾ ಆಧುನಿಕ ರೋಗಗಳನ್ನು ತಡೆಯಲು ಸಹಕಾರಿ.
ಅಷ್ಟೇ ಮುಖ್ಯವಾಗಿ, ಕ್ಯಾನ್ಸರ್ ಉಂಟಾಗುವ ಅಪಾಯವುಳ್ಳವರು ಆ ಕುರಿತು ನಿಗಾ ವಹಿಸುತ್ತಿರುವುದೊಳ್ಳೆಯದು. ಕ್ಯಾನ್ಸರ್ ಗುರುತಿಸಲ್ಪಟ್ಟರೆ ಹತಾಶರಾಗಿ ಧೃತಿಗೆಡುವ ಬದಲು ಕೂಡಲೇ ತಜ್ಞರನ್ನು ಕಂಡು ಸೂಕ್ತ ಪರೀಕ್ಷೆ ಹಾಗೂ ಚಿಕಿತ್ಸೆಗಳನ್ನು ಮಾಡಿಸಿಕೊಳ್ಳಬೇಕು. ಬದಲಿ ಚಿಕಿತ್ಸೆ, ಪ್ರಾರ್ಥನೆ, ಮಂತ್ರ-ತಂತ್ರಗಳ ಪೊಳ್ಳು ಭರವಸೆಗಳನ್ನು ನಂಬಿದರೆ ಕ್ಯಾನ್ಸರ್ ಉಲ್ಬಣಿಸಿ ಚಿಕಿತ್ಸೆಯೇ ಅಸಾಧ್ಯವಾಗಬಹುದು.