ಮಾಂಸಾಹಾರ ಸೇವನೆಯು ಅಮಾನವೀಯ ದುರ್ಗುಣವೇ? 

ಆರೋಗ್ಯ ಆಶಯ – ವಿಜಯ ಕರ್ನಾಟಕ: ಮಾಂಸಾಹಾರ ಸೇವನೆಯು ಅಮಾನವೀಯ ದುರ್ಗುಣವೇ? [ಸೆಪ್ಟೆಂಬರ್ 19, 2012, ಬುಧವಾರ] [ನೋಡಿ]

ನಮ್ಮ ಆಹಾರವು ಶರೀರಕ್ಕೆ ಅನುಗುಣವಾಗಿರಬೇಕು, ಭಾವನೆಗಳಿಗಲ್ಲ

‘ಅಯ್ಯೋ, ನಾನು ಹುಟ್ಟಿನಿಂದಲೇ ಸಸ್ಯಾಹಾರಿ, ಸಾಯೋವರೆಗೂ ಮೀನು-ಮೊಟ್ಟೆ ಮುಟ್ಟಲಾರೆ’ ಎನ್ನುವ ಹಠವಾದಿಗಳೂ, ‘ನಮ್ಮ ಧರ್ಮದವರೆಲ್ಲಾ ಒಂದು, ಆದರೆ ಮಾಂಸಾಹಾರಿಗಳೊಡನೆ ಕೂರಲಾರೆ’ ಎನ್ನುವ ಮಠಾಧೀಶರೂ, ‘ಬಿಸಿಯೂಟದಲ್ಲಿ ಮೊಟ್ಟೆ ಕೊಟ್ರೆ ಮಕ್ಕಳು ಕೆಟ್ಟು ಕ್ರೂರಿಗಳಾಗ್ತಾರೆ’ ಎನ್ನುವ ಮಂತ್ರಿಗಳೂ, ‘ಮೀನು-ಮಾಂಸದ ವಾಸನೆ ಆಗೋದಿಲ್ಲ’ ಅಂತ ಮೂಗು ಮುರಿಯುವ ಪ್ರಗತಿಪರರೂ ನಮ್ಮಲ್ಲಿದ್ದಾರೆ. ಇಂತಹ ವೈಯಕ್ತಿಕ ಅಭಿಪ್ರಾಯಗಳು ಇತರರ ಊಟದ ಮೇಲೆ ಪ್ರಭಾವ ಬೀರಬಹುದೆನ್ನುವ ಕಾರಣಕ್ಕೆ ಅವನ್ನು ಒರೆಗೆ ಹಚ್ಚುವುದೊಳ್ಳೆಯದು.

ಮನುಷ್ಯರು ಹುಟ್ಟಿನಿಂದಲೇ ಸಸ್ಯಾಹಾರಿಗಳೇ? ಆಧುನಿಕ ಮಾನವ ವಿಕಾಸಗೊಂಡದ್ದು ಪೂರ್ವ ಆಫ್ರಿಕಾದ ಸೀಳು ಕಣಿವೆಗಳಲ್ಲಿ, ಸುಮಾರು 2 ಲಕ್ಷ ವರ್ಷಗಳ ಹಿಂದೆ. ಇಂದು ವಿಶ್ವದಾದ್ಯಂತವಿರುವ 700 ಕೋಟಿ ಮನುಷ್ಯರೆಲ್ಲರೂ ಆಫ್ರಿಕಾದ ಈ ಮೂಲ ಸಂತತಿಯಿಂದ ಕಾಲಾಂತರದಲ್ಲಿ ಹುಟ್ಟಿದ ಹತ್ತು ಗಂಡಸರು ಹಾಗೂ ಹದಿನೆಂಟು ಹೆಂಗಸರ ಪೀಳಿಗೆಗಳಿಗೆ ಸೇರಿದವರು. ನಮ್ಮೆಲ್ಲರೊಳಗಿರುವ 20687 ವಂಶವಾಹಿಗಳಲ್ಲಿ ಶೇ.99.99ರಷ್ಟು ಸಾಮ್ಯತೆ; ಎಲ್ಲರೊಂದೇ – ಮನುಜರು! ಮಾಂಸಾಹಾರವೇ ನಮ್ಮ ವಿಕಾಸಕ್ಕೆ ಮೂಲ ಕಾರಣ – ನಮ್ಮೆಲ್ಲರ ಪೂರ್ವಜರು ಆ ಕಣಿವೆಗಳ ಹಳ್ಳಕೊಳ್ಳಗಳಲ್ಲಿದ್ದ ಮೀನು, ಆಮೆ, ಮೊಸಳೆ ಇತ್ಯಾದಿ ಜಲಚರಗಳನ್ನು ಕಲ್ಲುಗಳಿಂದ ಹೊಡೆದು ಭಕ್ಷಿಸಿದ್ದರಿಂದಲೇ ನಮ್ಮ ಮೆದುಳು ಇಷ್ಟೊಂದು ದೊಡ್ಡದಾಗಿ, ಚುರುಕಾಗಿ ಬೆಳೆಯಿತು; ನಮ್ಮ ಮೆದುಳಿನ ರಚನೆಯಲ್ಲಿ ಮೀನಿನೆಣ್ಣೆಗಳ ಪಾಲು ಶೇ. 60ರಷ್ಟು! ಮಾಂಸವನ್ನು ಸಿಗಿಯಲು ನಾವು ಬಳಸಿದ್ದು, ಬಳಸುತ್ತಿರುವುದು ಕೋರೆ ಹಲ್ಲುಗಳನ್ನಲ್ಲ, ಬದಲಿಗೆ ಚೂಪು ಕಲ್ಲುಗಳನ್ನು, ಈಟಿ-ಭರ್ಜಿಗಳನ್ನು, ಚೂರಿ-ಮುಳ್ಳು ಚಮಚಗಳನ್ನು. ನಮ್ಮ ಪಚನಾಂಗದ ರಚನೆಯೂ ಮಿಶ್ರಾಹಾರಕ್ಕೆ ಪೂರಕ – ಮಾಂಸಾಹಾರಿ ಪ್ರಾಣಿಗಳಿಗಿಂತ ಉದ್ದ, ಸಸ್ಯಾಹಾರಿಗಳಿಗಿಂತ ಗಿಡ್ಡ. ಹೀಗೆ ನಾವು ಮನುಜರೆಲ್ಲರೂ ಮೀನು-ಮಾಂಸ-ಮೊಟ್ಟೆಗಳನ್ನು ಸುಲಭದಲ್ಲಿ ಅರಗಿಸಿಕೊಳ್ಳಬಲ್ಲ ಮಾಂಸಾಹಾರಿಗಳು.

ಆಫ್ರಿಕಾದಿಂದ ಹೊರಟ ಮಾನವರ ದಂಡು ಸುಮಾರು 60000 ವರ್ಷಗಳ ಹಿಂದೆ ಭರತ ಖಂಡವನ್ನು ತಲುಪಿತು. ಸುಮಾರು 10000 ವರ್ಷಗಳ ಹಿಂದಿನವರೆಗೂ ವಿವಿಧ ಜಲಚರಗಳು, ಕಾಡುಪ್ರಾಣಿಗಳು ಹಾಗೂ ಸೊಪ್ಪು-ತರಕಾರಿಗಳೇ ನಮ್ಮ ಪೂರ್ವಜರ ಆಹಾರಗಳಾಗಿದ್ದವು. ಸುಮಾರು 9000 ವರ್ಷಗಳ ಹಿಂದೆ ಮೆಹರ್ ಘರ್ ಪ್ರದೇಶದಲ್ಲಿ (ಇಂದಿನ ಬಲೂಚಿಸ್ತಾನ) ಗೋಧಿ, ಬಾರ್ಲಿಗಳಂತಹ ಧಾನ್ಯಗಳನ್ನು ಬೆಳೆಯಲಾರಂಭಿಸಲಾಯಿತು, ಜೊತೆಗೆ ಕುರಿ, ಆಡು ಹಾಗೂ ಆಕಳುಗಳನ್ನು ಕೃಷಿಗಾಗಿಯೂ, ಮಾಂಸಕ್ಕಾಗಿಯೂ ಪಳಗಿಸಲಾಯಿತು. ಆಹಾರವನ್ನು ಹುಡುಕಿ ಅಂಡಲೆಯುವ ಬದಲು ಒಂದೆಡೆ ನೆಲೆ ನಿಂತು ಉತ್ಪಾದಿಸತೊಡಗಿದಾಗ ನಾಗರಿಕತೆ ಹುಟ್ಟಿತು, ತಂತ್ರಜ್ಞಾನ ಬೆಳೆಯಿತು. ಸುಮಾರು 3500 ವರ್ಷಗಳ ಹಿಂದೆ ಯುರೇಷಿಯಾದಲ್ಲಿ ಅದಾಗಲೇ ನೆಲೆಸಿದ್ದ ಇನ್ನೊಂದಷ್ಟು ಜನ ಭಾರತಕ್ಕೆ ವಲಸೆ ಬಂದರು; ಅವರ ಜೀವನಕ್ರಮಗಳೂ, ವೇದಗಳೂ ಬಂದವು, ಜೊತೆಗೆ ಮೇಲು-ಕೀಳುಗಳೂ, ಅಸ್ಪೃಶ್ಯತೆಗಳೂ ಬೆಳೆದವು.

ಆ ಕಾಲದಲ್ಲಿ ಎಲ್ಲರ ತಟ್ಟೆಗಳಲ್ಲೂ ಮಾಂಸವಿತ್ತು, ಅದು ಅತ್ಯುತ್ತಮವೆನ್ನುವ ಅರಿವೂ ಇತ್ತು.(ಶತಪಥ ಬ್ರಾಹ್ಮಣ, 11.7.1.3) ತಿನ್ನುವ ಮಾಂಸಗಳು, ಸಸ್ಯಗಳು, ಧಾನ್ಯಗಳು ಎಲ್ಲಕ್ಕೂ ಹಿಂಸೆಯಾಗುತ್ತವೆ ಎಂಬ ಪರಿವೆಯೂ ಇತ್ತು; ಅದಕ್ಕಾಗಿ ಪರಮ ಶಕ್ತಿಗೆ ಸಮರ್ಪಿಸಿ ತಿನ್ನಬೇಕೆನ್ನುವ ನಿವಾರಣೋಪಾಯವನ್ನೂ ಮಾಡಲಾಗಿತ್ತು; ತಪ್ಪಿದಲ್ಲಿ ಇನ್ನೊಂದು ಲೋಕದಲ್ಲಿ ಅವುಗಳಿಂದಲೇ ತಿನ್ನಲ್ಪಡಬೇಕಾದೀತು ಎಂದು ಆಹಾರಗಳಿಗೆಲ್ಲ ಗೌರವವನ್ನೂ ಒದಗಿಸಲಾಗಿತ್ತು. (ಜೈಮಿನೀಯ ಬ್ರಾಹ್ಮಣ, 1.42-44; ಶತಪಥ ಬ್ರಾಹ್ಮಣ, 12.9.1.1) ಮುಂದೆ ದೇವತೆಗಳ ಹೆಸರಲ್ಲಿ ನೂರುಗಟ್ಟಲೆ ಪ್ರಾಣಿ-ಪಕ್ಷಿಗಳ ಮಾರಣಹೋಮ ನಡೆಸುವ ಆಚರಣೆಗಳು ಅತಿರೇಕಕ್ಕೇರಿದಾಗ ಪ್ರತಿರೋಧವೂ ಹೆಚ್ಚಿತು. ಸುಮಾರು 2600 ವರ್ಷಗಳ ಹಿಂದೆ, ಕರುಣೆ, ಅಹಿಂಸೆ, ಪರಿಶುದ್ಧತೆ ಹಾಗೂ ವಿರಕ್ತಿಗಳನ್ನು ಬೋಧಿಸಿದ ಜೈನ ಧರ್ಮದಿಂದ ಪ್ರೇರಿತರಾದವರು ಮಾಂಸವನ್ನೂ, ಕೆಲ ಸಸ್ಯಗಳನ್ನೂ ವರ್ಜಿಸಿದರು. ಅದೇ ಕಾಲದಲ್ಲಿ ಗೌತಮ ಬುದ್ಧರು ಅನಗತ್ಯವಾದ ಪ್ರಾಣಿಹಿಂಸೆಯನ್ನು ಬಲವಾಗಿ ವಿರೋಧಿಸಿದರು, ಆದರೆ ಮಾಂಸಾಹಾರಕ್ಕೆ ಅಡ್ಡಿ ಪಡಿಸಲಿಲ್ಲ. ಜೈನ, ಬೌದ್ಧ ಧರ್ಮಗಳ ಜನಪ್ರಿಯತೆ ಹೆಚ್ಚಿದಂತೆ ವೈದಿಕ ವ್ಯವಸ್ಥೆಯಲ್ಲೂ ಸುಧಾರಣೆಗಳಾಗಿ,ಆಹಾರವನ್ನು ಕ್ರಮಬದ್ಧವಾಗಿ ತಿನ್ನಬೇಕೆನ್ನುವ ಕಟ್ಟಳೆಗಳನ್ನು ಮತ್ತೆ ಬಲಪಡಿಸಲಾಯಿತು. ಹೀಗೆ, ತಿನ್ನಲಿಕ್ಕಾಗಿಯೇ ಸೃಷ್ಟಿಸಲ್ಪಟ್ಟಿರುವ ಪ್ರಾಣಿಗಳನ್ನು ಬ್ರಾಹ್ಮಣರು ಪ್ರತಿನಿತ್ಯವೂ ತಿನ್ನಬಹುದು, ಆದರೆ, ವಿಧಿಬಾಹಿರವಾಗಿ ತಿಂದರೆ ಮರಣಾನಂತರ ಈ ವಧಿತ ಪ್ರಾಣಿಗಳಿಗೆ ಆಹಾರವಾಗಬೇಕಾಗುತ್ತದೆ ಎಂದು ಮನುಸ್ಮೃತಿಯಲ್ಲಿ (5:28-33) ಹೇಳಲಾಗಿದೆ. ಕುರಾನ್ (2:172) ಹಾಗೂ ಬೈಬಲ್ (ಆದಿ ಕಾಂಡ, 9:3; ಧರ್ಮೋಪದೇಶ ಕಾಂಡ, 12:15) ಗಳಲ್ಲೂ ಮಾಂಸಾಹಾರಕ್ಕೆ ಅನುಮೋದನೆಯಿದ್ದು, ದೇವರು ಒದಗಿಸಿರುವ ಎಲ್ಲಾ ಒಳ್ಳೆಯ ಸಸ್ಯ-ಮಾಂಸಗಳನ್ನು ಕೃತಜ್ಞತೆಯಿಂದ ಇಚ್ಛಾನುಸಾರ ತಿನ್ನಬಹುದೆಂದು ಹೇಳಲಾಗಿದೆ. ಹೀಗೆ ಹೆಚ್ಚಿನ ಧರ್ಮಗಳಲ್ಲಿ ಪ್ರಾಣಿಹಿಂಸೆಯನ್ನು ಕನಿಷ್ಠಗೊಳಿಸಿ ಮಾಂಸಾಹಾರವನ್ನು ಅನುಮೋದಿಸಲಾಗಿದೆ. ಇಂದು ಜಗತ್ತಿನ ಶೇ. 95ಕ್ಕೂ ಹೆಚ್ಚು ಜನ ಮಾಂಸಾಹಾರಿಗಳೇ ಆಗಿದ್ದಾರೆ; ನಮ್ಮ ದೇಶದಲ್ಲೂ ಶೇ. 45ರಷ್ಟು ಬ್ರಾಹ್ಮಣರೂ ಸೇರಿದಂತೆ ಶೇ. 88ರಷ್ಟು ಮಾಂಸಾಹಾರಿಗಳಿದ್ದಾರೆ.

ಮಾಂಸಾಹಾರದಿಂದ ತಾಮಸ ಗುಣವುಂಟಾಗಿ ಕ್ರೌರ್ಯವು ಹೆಚ್ಚುತ್ತದೆಯೇ? ಮಠಾಧೀಶರು, ಮಂತ್ರಿಗಳಷ್ಟೇ ಅಲ್ಲ, ಆಯುರ್ವೇದ ಮತ್ತು ಯೋಗ ಪಂಡಿತರೆನಿಸಿಕೊಂಡ ಹಲವರೂ ಹಾಗನ್ನುತ್ತಾರೆ. ಅದು ನಿಜವಿದ್ದರೆ ಶೇ.95ರಷ್ಟು ಜನರು ಕ್ರೂರಿಗಳಾಗಬೇಕಿತ್ತು! ಅಪ್ಪಟ ಸಸ್ಯಾಹಾರಿಯೂ, ಪ್ರಾಣಿದಯಾಪರನೂ ಆಗಿದ್ದ ಹಿಟ್ಲರನಿಂದ ಆರು ಕೋಟಿ ಜನ ಸಾಯಬಾರದಿತ್ತು! ಹಾಗಾದರೆ, ಮಾಂಸಾಹಾರವು ತಾಮಸಿಕವೆನ್ನುವುದಕ್ಕೆ ಆಧಾರಗಳೆಲ್ಲಿ? ಆಯುರ್ವೇದದ ಮೇರುಕೃತಿಗಳಾದ ಚರಕ ಸಂಹಿತೆ (ಸೂತ್ರಸ್ಥಾನ, 27) ಹಾಗೂ ಅಷ್ಟಾಂಗ ಹೃದಯ (ಸೂತ್ರಸ್ಥಾನ, 6) ಗಳಲ್ಲಿ 350ರಷ್ಟು ಆಹಾರವಸ್ತುಗಳ ವಿವರಗಳಿದ್ದರೂ, ಸಾತ್ವಿಕ, ರಾಜಸಿಕ ಯಾ ತಾಮಸಿಕ ಆಹಾರಗಳೆಂಬ ವಿಚಾರವೇ ಅಲ್ಲಿಲ್ಲ. ಬದಲಿಗೆ, ಹುಲಿ, ಸಿಂಹ, ಜಾನುವಾರುಗಳು ಸೇರಿದಂತೆ 160ಕ್ಕೂ ಹೆಚ್ಚು ಪ್ರಾಣಿ-ಪಕ್ಷಿಗಳ ಮಾಂಸ-ಮೊಟ್ಟೆಗಳ ಗುಣಾವಗುಣಗಳನ್ನು ವಿಶ್ಲೇಷಿಸಿ, ಮಾಂಸಾಹಾರದಷ್ಟು ಅತ್ಯುತ್ತಮವಾದ ಪೋಷಣೆ ಬೇರೊಂದಿಲ್ಲ ಎಂದು ಅವುಗಳಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ (ಸೂತ್ರಸ್ಥಾನ, 27:87). ಚರಕ ಸಂಹಿತೆಯಲ್ಲಿ ತಾಮಸ ಗುಣವುಳ್ಳವನನ್ನು ಮೂಢ, ಪುಕ್ಕಲು, ಸೋಮಾರಿ, ಹೇಡಿ, ಹೊಟ್ಟೆಬಾಕ ಎಂದೆಲ್ಲಾ ವಿವರಿಸಲಾಗಿದ್ದು, ಕ್ರೂರಿಯೆಂದು ಹೇಳಿಯೇ ಇಲ್ಲ (ಶರೀರಸ್ಥಾನ, 4:36-40); ಮಾತ್ರವಲ್ಲ, ಈ ಮೂರು ಮನೋಗುಣಗಳೂ ಹುಟ್ಟಿನಿಂದಲೇ ಬರುತ್ತವೆಯೆಂದು ಹೇಳಲಾಗಿದ್ದು, ಯಾವುದೇ ಆಹಾರಗಳಿಂದ ಉಂಟಾಗಬಹುದೆಂದಿಲ್ಲ.(ಶರೀರಸ್ಥಾನ, 8:16) ಭಗವದ್ಗೀತೆಯಲ್ಲಿ (17:8-10) ಈ ಮನೋಗುಣಗಳುಳ್ಳವರು ಬಯಸುವ ಆಹಾರಗಳ ಬಗ್ಗೆ ಹೇಳಲಾಗಿದ್ದರೂ, ಆಹಾರದಿಂದ ಅಂತಹಾ ಗುಣಗಳು ಉಂಟಾಗುತ್ತವೆಯೆಂದಾಗಲೀ, ಸಾತ್ವಿಕ ಗುಣವುಳ್ಳವರು ಮಾಂಸವನ್ನು ತಿನ್ನುವುದಿಲ್ಲವೆಂದಾಗಲೀ ಹೇಳಿಲ್ಲ. ನಿಜವೆಂದರೆ, ಆಹಾರದಲ್ಲಿ ಮೀನಿನೆಣ್ಣೆಯ ಕೊರತೆಯಿಂದ ಮಾನಸಿಕ ಖಿನ್ನತೆ, ಆತಂಕ, ಏಕಾಗ್ರತೆಯ ಕೊರತೆ, ಕಲಿಕೆಯ ತೊಂದರೆಗಳು, ಮರೆಗುಳಿತನ ಇತ್ಯಾದಿಗಳು ಉಂಟಾಗುತ್ತವೆಯೆಂದೂ, ಗರ್ಭಾವಸ್ಥೆಯ ಕೊನೆಯ ಮೂರು ತಿಂಗಳುಗಳಲ್ಲಿ ಹಾಗೂ ಮಗುವಿನ ಸ್ತನಪಾನದ ವೇಳೆ ಮೀನಿನ ಸೇವನೆ ಅತ್ಯಗತ್ಯವೆಂದೂ ಇತ್ತೀಚಿನ ಹಲವು ಅಧ್ಯಯನಗಳು ಶ್ರುತಪಡಿಸಿವೆ. ಇದಕ್ಕಿದಿರಾಗಿ, ಸಕ್ಕರೆಯ ಅತಿಸೇವನೆಯಿಂದ ಚಿತ್ತಚಾಂಚಲ್ಯ, ಮಂಕುತನ ಹಾಗೂ ಹಲವಿಧದ ಭಾವನಾತ್ಮಕ ಸಮಸ್ಯೆಗಳು ಉಂಟಾಗಬಹುದೆನ್ನುವುದೂ ಈಗ ಸಿದ್ಧಗೊಂಡಿದೆ. ಹಾಗಿರುವಾಗ ಸಾತ್ವಿಕ ಯಾವುದು, ತಾಮಸಿಕ ಯಾವುದು?

ಮಾಂಸಾಹಾರ ನಮಗೆ ಅತ್ಯಗತ್ಯವೇ? ನಮಗೆ ದಿನವೊಂದಕ್ಕೆ ಕನಿಷ್ಠ 45-60ಗ್ರಾಂ ಪ್ರೊಟೀನು ಅಗತ್ಯವಿದ್ದು, ಸಸ್ಯಾಹಾರವನ್ನೇ ನೆಚ್ಚಿಕೊಂಡಿದ್ದರೆ ಇದನ್ನು ಪೂರೈಸುವುದು ಕಷ್ಟವೇ. ಮೀನು, ಮೊಟ್ಟೆ, ಮಾಂಸಗಳಂತಹ ಪ್ರಾಣಿಜನ್ಯ ಪ್ರೊಟೀನುಗಳು ಸುಲಭದಲ್ಲಿ ಜೀರ್ಣಗೊಂಡು ಸಂಪೂರ್ಣವಾಗಿ ಹೀರಲ್ಪಡುತ್ತವೆ. ಮಾಂಸಾಹಾರವು ನಮಗೆ ಅತ್ಯಗತ್ಯವಾದ ಎಲ್ಲಾ ಅಮೈನೋ ಆಮ್ಲಗಳನ್ನು ಒದಗಿಸುವುದರ ಜೊತೆಗೆ, ಕಬ್ಬಿಣ, ಸತು, ಬಿ-12 ಅನ್ನಾಂಗ ಇತ್ಯಾದಿ ಪೋಷಕಾಂಶಗಳನ್ನೂ ಒದಗಿಸುತ್ತದೆ. ಪ್ರಾಣಿಜನ್ಯ ಪ್ರೊಟೀನುಗಳು ನಮ್ಮ ದೇಹಕ್ಕೆ ಸುಲಭವಾಗಿ ಒಗ್ಗಿಕೊಂಡರೆ, ಸಸ್ಯಜನ್ಯ ಪ್ರೊಟೀನುಗಳಿಗೆ ಅಸಹಿಷ್ಣುತೆ (ಅಲರ್ಜಿ) ಉಂಟಾಗುವ ಸಾಧ್ಯತೆಗಳು ಹೆಚ್ಚು. ನಮ್ಮ ಮೆದುಳಿನ ಕೆಲಸಗಳು ಸಾಂಗವಾಗಿ ನಡೆಯುವುದಕ್ಕೂ, ರಕ್ತನಾಳಗಳ ಆರೋಗ್ಯವನ್ನು ಕಾಪಾಡುವುದಕ್ಕೂ ಮೀನಿನೆಣ್ಣೆಯ ಮೇದೋ ಆಮ್ಲಗಳು ಅತ್ಯಗತ್ಯವಾಗಿದ್ದು, ಅವು ಯಾವುದೇ ಸಸ್ಯಾಹಾರದಲ್ಲೂ ದೊರೆಯುವುದಿಲ್ಲ. ಇಷ್ಟೇ ಅಲ್ಲದೆ, ಪ್ರಾಣಿಜನ್ಯ ಮೇದಸ್ಸು ಹಾಗೂ ಪ್ರೊಟೀನುಗಳು ನಮಗೆ ಬೇಗನೇ ಸಂತೃಪ್ತಿಯನ್ನುಂಟು ಮಾಡಿ ಹಸಿವೆಯನ್ನು ನಿಯಂತ್ರಿಸುವಲ್ಲಿಯೂ ನೆರವಾಗುತ್ತವೆ.

ಮಾಂಸಾಹಾರದಿಂದ ರೋಗಗಳು ಹೆಚ್ಚುತ್ತವೆಯೇ? ಅದಕ್ಕೂ ಆಧಾರಗಳಿಲ್ಲ. ಮಧುಮೇಹ, ರಕ್ತದ ಏರೊತ್ತಡ, ಹೃದಯಾಘಾತ ಮುಂತಾದ ಕಾಹಿಲೆಗಳು ಸಸ್ಯಾಹಾರಿಗಳನ್ನೂ, ಮಾಂಸಾಹಾರಿಗಳನ್ನೂ ಸಮಾನವಾಗಿ ಬಾಧಿಸುತ್ತವೆ. ಎಲ್ಲರೂ ತಿನ್ನುವ ಸಕ್ಕರೆ, ಧಾನ್ಯಗಳು ಹಾಗೂ ಸಂಸ್ಕರಿತ ಆಹಾರಗಳೇ ಇದಕ್ಕೆ ಮುಖ್ಯ ಕಾರಣವೆನ್ನುವುದಕ್ಕೆ ಈಗ ಬಲವಾದ ಪುರಾವೆಗಳಿವೆ. ಆದ್ದರಿಂದ ಅಂತಹ ‘ಸಸ್ಯಾಹಾರದ’ ಬದಲಿಗೆ ಸಾಕಷ್ಟು ತರಕಾರಿಗಳನ್ನೂ, ಹಿತಮಿತವಾಗಿ ಮಾಂಸಾಹಾರವನ್ನೂ ಸೇವಿಸಿದರೆ ಆರೋಗ್ಯವಂತರಾಗಿರಲು ಸಾಧ್ಯವಿದೆ. ಈಗಲೂ ಕಾಡಿನೊಳಗೆ ಪ್ರಾಣಿಗಳು ಹಾಗೂ ಸೊಪ್ಪು-ಕಾಯಿಗಳನ್ನಷ್ಟೇ ತಿಂದು ಬದುಕುತ್ತಿರುವ ಆದಿವಾಸಿಗಳಲ್ಲಿ ಈ ಆಧುನಿಕ ರೋಗಗಳ ಸುಳಿವೇ ಇಲ್ಲವೆನ್ನುವುದು ಇದನ್ನು ಪುಷ್ಠೀಕರಿಸುತ್ತದೆ.

ಆದ್ದರಿಂದ ನಮ್ಮ ಶರೀರಧರ್ಮಕ್ಕೆ ಅನುಗುಣವಾದ, ಆರೋಗ್ಯಕ್ಕೆ ಪೂರಕವಾದ ಮಾಂಸಾಹಾರ ಸೇವನೆಗೆ ಜಾತಿ-ಧರ್ಮಗಳ ಹಂಗು ಅಡ್ಡಿಯಾಗದಿರಲಿ, ಈಗಾಗಲೇ ಪೌಷ್ಠಿಕತೆಯ ತೊಂದರೆಗಳಿಂದ ಬಳಲುತ್ತಿರುವ ನಮ್ಮ ಮಕ್ಕಳಿಗೆ ಚಾಕ್ಲೇಟು-ಬಿಸ್ಕತ್ತುಗಳ ಬದಲಿಗೆ ಮೀನು-ಮೊಟ್ಟೆಗಳು ಸಿಗುವಂತಾಗಲಿ. ’ಕೊಲ್ಲೆನಯ್ಯಾ ಪ್ರಾಣಿಗಳ, ಮೆಲ್ಲೆನಯ್ಯಾ ಬಾಯಿಚ್ಛೆಗೆ’ ಎಂದು ಸ್ವತಃ ಮಾಂಸಾಹಾರವನ್ನು ಇಚ್ಛಿಸದಿದ್ದರೂ, ನಾಯಿಮಾಂಸ ಸೇವಿಸುತ್ತಿದ್ದ ಶ್ವಪಚರನ್ನೂ, ‘ಎಡದ ಕೈಯಲಿ ಕತ್ತಿ, ಬಲದ ಕೈಯಲಿ ಮಾಂಸ, ಬಾಯಲಿ ಸುರೆಯ ಗಡಿಗೆ’ ಹೊತ್ತಿದ್ದವರನ್ನೂ ತಿರಸ್ಕರಿಸದೆ, ‘ಕೊರಳಲಿ ದೇವರಿರಲು’ ಅವರಲ್ಲೂ ಶಿವಸ್ವರೂಪವನ್ನು ಕಂಡಿದ್ದ ನಮ್ಮ ನಾಡಿನ ಅತಿ ಶ್ರೇಷ್ಠ ದಾರ್ಶನಿಕ ಬಸವಣ್ಣನವರ ಉದಾರತೆ ಹಾಗೂ ಮಾನವೀಯ ಕಳಕಳಿಗಳು ಎಲ್ಲರಿಗೆ ದಾರಿ ತೋರಲಿ, ಸದ್ಬುದ್ಧಿಯನ್ನು ಕೊಡಲಿ.

Leave a Reply

Your email address will not be published. Required fields are marked *