ಆರೋಗ್ಯ ಆಶಯ – ವಿಜಯ ಕರ್ನಾಟಕ: ಬಾಯಿ ಕಟ್ಟಿ, ನೆಲ ಮೆಟ್ಟಿದರೆ ಹೃದಯ ಗಟ್ಟಿ [ಅಕ್ಟೋಬರ್ 1, 2014, ಬುಧವಾರ] [ನೋಡಿ | ನೋಡಿ]
ಸರಳ ಜೀವನ, ಮಿತ ಆಹಾರ, ನಿಯತ ವ್ಯಾಯಾಮಗಳು ಹೃದ್ರೋಗವನ್ನು ತಡೆಯಬಲ್ಲವು, ಯೋಗಾಭ್ಯಾಸವಲ್ಲ
ಸೆಪ್ಟೆಂಬರ್ 29ರ ವಿಶ್ವ ಹೃದಯ ದಿನಾಚರಣೆ ಮುಗಿದು 48 ಗಂಟೆಗಳಲ್ಲಿ ಮತ್ತೊಂದು ಲಕ್ಷ ಜನ ಹೃದಯ ಹಾಗೂ ರಕ್ತನಾಳಗಳ ಕಾಯಿಲೆಯಿಂದ ಮೃತರಾಗಿರುತ್ತಾರೆ. ಮನುಕುಲವನ್ನು ಕಾಡುವ ಈ ನಂ. 1 ಕಾಯಿಲೆ, ಮೂರರಲ್ಲೊಂದು ಸಾವಿಗೆ ಕಾರಣವಾಗುತ್ತಿದೆ. ನಮ್ಮ ದೇಶದಲ್ಲೂ ಸಾವಿಗೆ ಅತಿ ಸಾಮಾನ್ಯ ಕಾರಣ ಅದುವೇ; ಪ್ರತೀ ವರ್ಷ ಅದಕ್ಕೆ ಬಲಿಯಾಗುವ ಭಾರತೀಯರ ಸಂಖ್ಯೆ ಸುಮಾರು 30 ಲಕ್ಷದಷ್ಟು. ನಲುವತ್ತರ ವಯಸ್ಸು ದಾಟಿದರೆ ಇಬ್ಬರಲ್ಲೊಬ್ಬ ಗಂಡಸಿಗೆ, ಮೂರರಲ್ಲೊಬ್ಬ ಹೆಂಗಸಿಗೆ ಹೃದಯಾಘಾತದ ಅಪಾಯ ಎದುರಾಗುತ್ತದೆ.
ಹೃದಯ ದಿನಾಚರಣೆಯಂತಹ ಕಾರ್ಯಕ್ರಮಗಳು ಎಡೆಬಿಡದೆ ನಡೆಯುತ್ತಿದ್ದಂತೆ ಹೃದ್ರೋಗಗಳಿಗೆ ಬಲಿಯಾಗುತ್ತಿರುವವರ ಸಂಖ್ಯೆಯೂ ಏರುತ್ತಲಿದೆ. ಬಹಳಷ್ಟು ಜನ ಹೃದ್ರೋಗವಿಲ್ಲದಿದ್ದರೂ ಬಗೆಬಗೆಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳುತ್ತಿರುತ್ತಾರೆ, ಅತ್ತ ನಿಜಕ್ಕೂ ಹೃದ್ರೋಗವುಳ್ಳ ಹಲವರು ಅಜ್ಞಾನದಿಂದಲೋ, ಔದಾಸೀನ್ಯದಿಂದಲೋ ಅದನ್ನು ಕಡೆಗಣಿಸಿ ಕಷ್ಟಕ್ಕೊಳಗಾಗುತ್ತಿರುತ್ತಾರೆ. ಹಾಗೆಯೇ, ಎದೆಬೇನೆ ಎಂದವರಲ್ಲೆಲ್ಲ ವೈದ್ಯರು ಇಸಿಜಿ, ಆಂಜಿಯೋಗ್ರಾಂ ಇತ್ಯಾದಿ ಮಾಡಿಸುವುದಿದೆ, ಆದರೆ ನಿಜಕ್ಕೂ ಹೃದ್ರೋಗದ ಲಕ್ಷಣಗಳುಳ್ಳವರಲ್ಲಿ ಇವನ್ನು ಮರೆಯುವುದೂ ಇದೆ. ಅಂತೂ ಹೃದ್ರೋಗಗಳಿಂದಾಗಿ ವರ್ಷಕ್ಕೆ 60 ಲಕ್ಷ ಕೋಟಿಯಷ್ಟು ವೆಚ್ಚವಾಗುತ್ತಿದೆ, 1.7 ಕೋಟಿಗೂ ಹೆಚ್ಚು ಜನ ಸಾಯುತ್ತಿದ್ದಾರೆ; 2030ರ ವೇಳೆಗೆ ಇದು 2.3 ಕೋಟಿಯಷ್ಟಾಗಲಿದೆ.
ಒಂದೆರಡು ದಶಕಗಳ ಹಿಂದೆ ಹೃದಯಾಘಾತವು 60-70ರ ವಯಸ್ಸಿನವರಲ್ಲಿ ಹೆಚ್ಚು ಸಾಮಾನ್ಯವಾಗಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ 20-30 ವಯಸ್ಸಿನವರೂ ಹೃದಯಾಘಾತಕ್ಕೀಡಾಗುತ್ತಿದ್ದಾರೆ. ಆಗ ಮುಟ್ಟು ನಿಂತ, ಹಿರಿವಯಸ್ಸಿನ ಮಹಿಳೆಯರಲ್ಲಷ್ಟೇ ಹೃದಯಾಘಾತವಾಗುತ್ತಿದ್ದರೆ, ಈಗೀಗ 30-40ರ ಮಹಿಳೆಯರಲ್ಲೂ ಆಗುತ್ತಿದೆ. ಮೊದಲು ನಗರಗಳಲ್ಲೇ ಹೆಚ್ಚಿದ್ದುದು ಈಗ ಹಳ್ಳಿಗಳನ್ನೂ ಕಾಡುತ್ತಿದೆ, ಅಲ್ಲಿ ಸೌಲಭ್ಯಗಳ ಕೊರತೆಯಿಂದ ಸಾವುಗಳೂ ಹೆಚ್ಚುತ್ತಿವೆ. ಈ ಎರಡು ದಶಕಗಳಲ್ಲಿ ಮಾರುಕಟ್ಟೆ ಮುಕ್ತವಾಗಿ, ಸ್ವಂತ ಕೃಷಿ ದೂರವಾಗಿ, ಹಗಲು-ರಾತ್ರಿ ದುಡಿತವಾಗಿ, ಸಿದ್ಧತಿನಿಸುಗಳೇ ಆಹಾರವಾದ ಬಳಿಕ ಆಧುನಿಕ ರೋಗಗಳೂ ಹೆಚ್ಚತೊಡಗಿವೆ, ಕಿರಿಯರನ್ನೂ ಕಾಡತೊಡಗಿವೆ.
ದೇಹದಲ್ಲಿ ಉರಿಯೂತ ಹೆಚ್ಚುವುದರಿಂದ ರಕ್ತನಾಳಗಳು ಹಾನಿಗೀಡಾಗಿ ಹೃದಯಾಘಾತ, ಮಿದುಳಿನ ಆಘಾತ (ಪಾರ್ಶ್ವವಾಯು)ಗಳಂತಹ ಮಾರಕ ಸಮಸ್ಯೆಗಳುಂಟಾಗುತ್ತವೆ ಎನ್ನುವುದಕ್ಕೆ ಪ್ರಬಲವಾದ ಆಧಾರಗಳೀಗ ಲಭ್ಯವಾಗುತ್ತಿವೆ. ಅನೈಸರ್ಗಿಕವಾದ, ಶರ್ಕರಭರಿತವಾದ, ಸಂಸ್ಕರಿಸಲ್ಪಟ್ಟ ಆಹಾರವೂ, ಧೂಮಪಾನ, ಮದ್ಯಪಾನ, ವ್ಯಾಯಾಮದ ಕೊರತೆಗಳೂ ನಮ್ಮ ದೇಹದಲ್ಲಿ ಉರಿಯೂತವನ್ನು ಹೆಚ್ಚಿಸುತ್ತವೆ, ರಕ್ತನಾಳಗಳಿಗೆ ಹಾನಿಯುಂಟು ಮಾಡುತ್ತವೆ. ಬೊಜ್ಜು, ಮಧುಮೇಹ, ರಕ್ತದಲ್ಲಿ ಅಧಿಕ ಕೊಬ್ಬಿನಾಂಶ, ಅಧಿಕ ರಕ್ತದೊತ್ತಡಗಳೂ ಇವೇ ಕಾರಣಗಳಿಂದಾಗುತ್ತವೆ, ಇವಿದ್ದವರಿಗೆ ಹೃದಯಾಘಾತದ ಅಪಾಯವೂ ಹೆಚ್ಚಿರುತ್ತದೆ. ರಕ್ತನಾಳಗಳಿಗೆ ಹಾನಿಯಾಗುವ ಪ್ರಕ್ರಿಯೆಯು ತೀರಾ ಎಳವೆಯಲ್ಲಿ, ಗರ್ಭಸ್ಥ ಶಿಶುವಾಗಿರುವಾಗಲೇ, ತೊಡಗುತ್ತದೆ. ಹಿಂದಿನವರು 50-60 ವರ್ಷಗಳಲ್ಲಿ ತಿಂದು, ಸೇದಿ ಉಂಟುಮಾಡುತ್ತಿದ್ದ ಹಾನಿಯನ್ನು ಇಂದಿನವರು ಹತ್ತಿಪ್ಪತ್ತು ವರ್ಷಗಳಲ್ಲೇ ಮಾಡುತ್ತಿರುವುದರಿಂದ ಅಷ್ಟೇ ಬೇಗನೆ ರೋಗಗ್ರಸ್ತರಾಗುತ್ತಿದ್ದಾರೆ.
ಕಳೆದೆರಡು ದಶಕಗಳಿಂದ ಈ ರಕ್ತನಾಳಘಾತಕ ಸಮಸ್ಯೆಗಳು ಹೆಚ್ಚಾಗುತ್ತಿವೆ. ರಕ್ತದ ಏರೊತ್ತಡದಿಂದ ಬಳಲುವವರ ಪ್ರಮಾಣವು ನಗರಗಳಲ್ಲಿ ಶೇ. 25-40ಕ್ಕೆ, ಹಳ್ಳಿಗಳಲ್ಲಿ ಶೇ. 10-15ಕ್ಕೆ ತಲುಪಿದೆ. ಮಧುಮೇಹವುಳ್ಳವರ ಸಂಖ್ಯೆ ನಾಲ್ಕು ಪಟ್ಟು ಹೆಚ್ಚಿ, ನಗರಗಳಲ್ಲಿ ಶೇ. 10-15 ಹಾಗೂ ಹಳ್ಳಿಗಳಲ್ಲಿ ಶೇ.3-5 ರಷ್ಟಾಗಿದೆ. ಎಲ್ಲೆಡೆ ಬೊಜ್ಜಿನ ಸಮಸ್ಯೆಯೂ ಹೆಚ್ಚುತ್ತಿದೆ, ರಕ್ತದ ಕೊಲೆಸ್ಟರಾಲ್, ಟ್ರೈಗ್ಲಿಸರೈಡ್ ನಂತಹ ಕೊಬ್ಬಿನ ಪ್ರಮಾಣಗಳಲ್ಲಿ ಏರಿಕೆಯಾಗುತ್ತಲಿದೆ. ಧೂಮಪಾನ, ಮದ್ಯಪಾನಗಳ ಪಿಡುಗು ಹೆಚ್ಚುತ್ತಿದೆ, ಎಲ್ಲ ರೀತಿಯ ಒತ್ತಡಗಳೂ ಹೆಚ್ಚುತ್ತಿವೆ, ತಿನ್ನುವುದು ಹೆಚ್ಚಿ ವ್ಯಾಯಾಮ ಕಡಿಮೆಯಾಗುತ್ತಿದೆ.
ಹೃದಯದ ಸ್ನಾಯುಗಳಿಗೆ ನಿರಂತರವಾಗಿ ರಕ್ತ ಪೂರೈಸುವುದಕ್ಕೆ ಬಲಭಾಗದಲ್ಲೊಂದು, ಎಡ ಭಾಗದಲ್ಲೆರಡು ಪರಿಧಮನಿಗಳಿವೆ. ಈ ಮೂರರಲ್ಲಿ ಯಾವುದೊಂದು ಮುಚ್ಚಿ ಹೋದರೂ ಹೃದಯದ ಸ್ನಾಯು ಹಾನಿಗೀಡಾಗಿ, ಹೃದಯಾಘಾತವಾಗುತ್ತದೆ. ರಕ್ತನಾಳದ ಒಳವ್ಯಾಸವು 70% ಕಡಿಮೆಯಾದಾಗ ರಕ್ತಪೂರೈಕೆಯು ಗಣನೀಯವಾಗಿ ಕಡಿಮೆಯಾಗಿ, ಹೃದಯಕ್ಕಾಗುವ ಕಷ್ಟಗಳು ಪ್ರಕಟಗೊಳ್ಳುತ್ತವೆ. ಶೇ.90ರಷ್ಟು ಮುಚ್ಚಿಕೊಂಡಾಗ ಅವು ತೀವ್ರವಾಗುತ್ತವೆ, ಪೂರ್ತಿ ಮುಚ್ಚಿದಾಗ ಹೃದಯಾಘಾತವಾಗುತ್ತದೆ. ಒಂದೇ ರಕ್ತನಾಳದಲ್ಲಿ ತೊಂದರೆಯಿದ್ದವರಿಗೆ ಕಷ್ಟಗಳು ಕಡಿಮೆ, ಮೂರೂ ರಕ್ತನಾಳಗಳಲ್ಲಿ ಕಾಯಿಲೆಯಿದ್ದವರಿಗೆ ಹೆಚ್ಚು.
ಹೃದಯಾಘಾತಕ್ಕೊಳಗಾಗುವ ಹೆಚ್ಚಿನವರಲ್ಲಿ ಒಂದಲ್ಲೊಂದು ರೀತಿಯ ಲಕ್ಷಣಗಳು ಇದ್ದೇ ಇರುತ್ತವೆ. ಯಾವುದೇ ಪೂರ್ವಲಕ್ಷಣಗಳಿಲ್ಲದೆ ಹಠಾತ್ ಹೃದಯಾಘಾತವಾಗುವುದು ವಿರಳವೇ. ಹೆಚ್ಚಿನ ಹೃದ್ರೋಗಿಗಳು ನಡೆದಾಡುವಾಗ, ಕೆಲಸ ಮಾಡುವಾಗ, ಅಥವಾ ಹೊಟ್ಟೆ ತುಂಬ ತಿಂದಾಗ ಕಷ್ಟಗಳನ್ನು ಅನುಭವಿಸುತ್ತಾರೆ. ನಡೆದಾಡುವಾಗ ಎದೆ ಯಾ ಕತ್ತು ಹಿಂಡಿದಂತಾಗುವುದು, ಎದೆ ಉಬ್ಬಿ ಬಂದಂತಾಗುವುದು ಯಾ ಭಾರವೆನಿಸುವುದು, ಎದೆಯ ಮಧ್ಯದಲ್ಲಿ, ಭುಜಗಳಲ್ಲಿ, ಕತ್ತಿನಲ್ಲಿ, ಬೆನ್ನಿನ ಮೇಲ್ಭಾಗದಲ್ಲಿ, ದವಡೆಯಲ್ಲಿ ನೋವು ಅಥವಾ ಸೆಳೆತ ಉಂಟಾಗುವುದು, ಉಸಿರಾಟಕ್ಕೆ ಕಷ್ಟವೆನಿಸುವುದು, ಎದೆ ಬಡಿತ ಹೆಚ್ಚುವುದು,ತಲೆ ಸುತ್ತಿದಂತಾಗುವುದು – ಇವೆಲ್ಲವೂ ಹೃದ್ರೋಗದ ಲಕ್ಷಣಗಳಾಗಿರಬಹುದು. ಎದೆ ನೋವಷ್ಟೇ ಹೃದ್ರೋಗದ ಲಕ್ಷಣವಲ್ಲ, ಎದೆ ನೋವಿಗೆ ಹೃದ್ರೋಗವೊಂದೇ ಕಾರಣವೂ ಅಲ್ಲ. ಆದ್ದರಿಂದ ನಡೆದಾಡುವಾಗ ಅಥವಾ ದುಡಿಯುವಾಗ ಯಾವುದೇ ರೀತಿಯ ಕಷ್ಟವೆನಿಸಿದರೂ ಜಾಗೃತರಾಗಬೇಕು, ಕೂಡಲೇ ವೈದ್ಯರನ್ನು ಕಾಣಬೇಕು. ವೈದ್ಯರೂ ಇಂತಹಾ ಲಕ್ಷಣಗಳಿರುವವರನ್ನು ಹೃದ್ರೋಗದ ಸಾಧ್ಯತೆಗಳಿಗಾಗಿ ಪರೀಕ್ಷೆಗಳಿಗೆ ಒಳಪಡಿಸಬೇಕು.
ಹೃದಯದ ರಕ್ತನಾಳಗಳ ಕಾಯಿಲೆಯನ್ನು ಗುರುತಿಸಲು ಇಸಿಜಿಯಂತಹ ಸರಳ ಪರೀಕ್ಷೆಗಳಿಂದ ಹಿಡಿದು ಆಂಜಿಯೋಗ್ರಾಂನಂತಹ ಅತಿ ನಿಖರವಾದ ಪರೀಕ್ಷೆಗಳು ಲಭ್ಯವಿವೆ. ಹೃದ್ರೋಗದ ಲಕ್ಷಣಗಳುಳ್ಳವರಲ್ಲಿ ಈ ಪರೀಕ್ಷೆಗಳನ್ನು ನಡೆಸುವುದು ಅತ್ಯಗತ್ಯ. ಆದರೆ ಯಾವುದೇ ಲಕ್ಷಣಗಳಿಲ್ಲದವರಲ್ಲಿ ಇವನ್ನು ನಡೆಸಿದರೆ ಲಾಭಕ್ಕಿಂತ ಹೆಚ್ಚು ನಷ್ಟವೇ ಆಗಬಹುದು, ಗೊಂದಲ, ಆತಂಕಗಳಿಗೂ, ಇನ್ನಷ್ಟು ಅನಗತ್ಯ ಪರೀಕ್ಷೆ-ಚಿಕಿತ್ಸೆಗಳಿಗೂ ದಾರಿಯಾಗಬಹುದು.
ಪರಿಧಮನಿಗಳ ಕಾಯಿಲೆಯುಳ್ಳವರಲ್ಲಿ ಕೆಲವೊಮ್ಮೆ ಇಸಿಜಿಯಲ್ಲಿ ಯಾವುದೇ ಬದಲಾವಣೆಗಳು ಗೋಚರಿಸುವುದಿಲ್ಲ. ಇನ್ನು ಕೆಲವರಲ್ಲಿ ಇಸಿಜಿಯಲ್ಲಿ ಬದಲಾವಣೆಗಳಿದ್ದರೂ ಹೃದ್ರೋಗವಿಲ್ಲದಿರಬಹುದು. ಆದ್ದರಿಂದ ಇಸಿಜಿಯೊಂದನ್ನೇ ನೋಡಿ ಹೃದ್ರೋಗದ ಬಗ್ಗೆ ಖಚಿತವಾಗಿ ಹೇಳಲಾಗದು. ಅಂಥ ಸನ್ನಿವೇಶಗಳಲ್ಲಿ ಟ್ರೆಡ್ ಮಿಲ್ ಪರೀಕ್ಷೆಯನ್ನು ನಡೆಸಬೇಕಾಗಬಹುದು.
ಆಂಜಿಯೋಗ್ರಾಂ ಪರೀಕ್ಷೆಯಲ್ಲಿ ಹೃದಯದ ಪರಿಧಮನಿಗಳೊಳಕ್ಕೆ ಸೂಕ್ಷ್ಮವಾದ ನಳಿಕೆಯೊಂದನ್ನು ತೂರಿಸಿ, ಅವುಗಳ ಮೂಲಕ ವಿಶೇಷ ಸಂಯುಕ್ತವೊಂದನ್ನು ಹರಿಸಿ, ಅವುಗಳ ಕ್ಷಕಿರಣ ಚಿತ್ರವನ್ನು ಪಡೆದು,ಯಾವ್ಯಾವ ಪರಿಧಮನಿಗಳಿಗೆ ಎಷ್ಟು ಹಾನಿಯಾಗಿದೆ ಎನ್ನುವುದನ್ನು ನಿಖರವಾಗಿ ನೋಡಬಹುದು. ಅಲ್ಲದೆ, ಮುಚ್ಚಿರಬಹುದಾದ ರಕ್ತನಾಳಗಳನ್ನು ಅದೇ ತೂರುನಳಿಕೆಯ ಮೂಲಕ ತೆರೆದು ಸರಿಪಡಿಸಬಹುದು. ಆಗ ತಾನೇ ಹೃದಯಾಘಾತವಾದವರಲ್ಲಿ, ಅಥವಾ ಹೃದಯಾಘಾತವಾಗುವ ಅಪಾಯವು ತೀವ್ರವಾಗುಳ್ಳವರಲ್ಲಿ ಈ ಪರೀಕ್ಷೆ-ಚಿಕಿತ್ಸೆಗಳು ಸಂಜೀವಿನಿಯಾಗುತ್ತವೆ.
ಆದರೆ ಇಂದು ಶೇ. 25ಕ್ಕೂ ಹೆಚ್ಚು ಸಂದರ್ಭಗಳಲ್ಲಿ ಇಂತಹ ದುಬಾರಿ ಪರೀಕ್ಷೆ-ಚಿಕಿತ್ಸೆಗಳನ್ನು ಹೃದ್ರೋಗದ ಯಾವುದೇ ಲಕ್ಷಣಗಳಿಲ್ಲದವರಲ್ಲಿ ಅನಗತ್ಯವಾಗಿ ನಡೆಸಲಾಗುತ್ತಿದೆ. ಈ ಅತ್ಯಾಧುನಿಕ ಚಿಕಿತ್ಸೆಗಳು ಖಾಸಗಿ ಆಸ್ಪತ್ರೆಗಳಲ್ಲೇ ಹೆಚ್ಚಾಗಿ ಲಭ್ಯವಿರುವುದರಿಂದ ಜನಸಾಮಾನ್ಯರಿಗೆ ಎಟಕುವುದಿಲ್ಲ; ಮಾತ್ರವಲ್ಲ, ಲಾಭಕ್ಕಾಗಿ ದುರುಪಯೋಗವಾಗುವ ಸಾಧ್ಯತೆಗಳೂ ಹೆಚ್ಚುತ್ತವೆ. ಸರಕಾರಕ್ಕೆ ಮನಸ್ಸಿದ್ದರೆ ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ಈ ಸೌಲಭ್ಯಗಳನ್ನು ಒದಗಿಸುವುದಕ್ಕೆ ಕಷ್ಟವೇನಿಲ್ಲ.
ನಮ್ಮ ಆಹಾರ ಹಾಗೂ ಜೀವನಶೈಲಿಗಳನ್ನು ಸರಿಪಡಿಸಿಕೊಂಡರೆ ಹೃದ್ರೋಗವನ್ನಷ್ಟೇ ಅಲ್ಲ, ಇತರ ಆಧುನಿಕ ರೋಗಗಳನ್ನೂ ತಡೆಯುವುದಕ್ಕೆ ಸಾಧ್ಯವಿದೆ. ಗರ್ಭಸ್ಥ ಮಗುವನ್ನು ರಕ್ಷಿಸುವಲ್ಲಿಂದಲೇ ಈ ಕೆಲಸ ತೊಡಗಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಸಿಹಿಯ ಸೇವನೆಯನ್ನು – ಸಕ್ಕರೆ, ಸಿಹಿತಿಂಡಿಗಳು, ಚಾಕಲೇಟು, ಲಘುಪೇಯಗಳು, ಐಸ್ ಕ್ರೀಂ ಇತ್ಯಾದಿಗಳನ್ನು, ಸಂಪೂರ್ಣವಾಗಿ ತ್ಯಜಿಸಬೇಕು, ಹಣ್ಣು ಮತ್ತು ಹಣ್ಣಿನ ರಸಗಳನ್ನು ವಿಪರೀತವಾಗಿ ಸೇವಿಸುವುದನ್ನು ಬಿಡಬೇಕು, ಬ್ರೆಡ್ಡು, ಬಿಸ್ಕತ್ತು, ನೂಡಲ್ಸ್, ಪೀಜಾ ಮುಂತಾದ ಎಲ್ಲಾ ಸಂಸ್ಕರಿತ ತಿನಿಸುಗಳನ್ನು ಬಿಡಬೇಕು. ಹಾಗೆಯೇ ಕರಿದ ತಿನಿನಿಸುಗಳನ್ನೂ ತ್ಯಜಿಸಬೇಕು. ಪ್ರಾಣಿಜನ್ಯ ಹಾಲು ಮತ್ತದರ ಉತ್ಪನ್ನಗಳನ್ನೂ ಬಿಟ್ಟರೆ ಒಳ್ಳೆಯದು. ಉಪ್ಪಿನ ಬಳಕೆಗೂ ಮಿತಿಯಿರಬೇಕು. ತರಕಾರಿ, ಮೊಳೆತ ಕಾಳುಗಳು, ಬೀಜಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬೇಕು, ಮೀನು ಕೂಡಾ ಒಳ್ಳೆಯದು. ಮೊಟ್ಟೆ, ಮಾಂಸಗಳನ್ನು ಹಿತಮಿತವಾಗಿ ಸೇವಿಸಬಹುದು. ಧೂಮಪಾನ, ಮದ್ಯಪಾನಗಳನ್ನು ಸಂಪೂರ್ಣವಾಗಿ ವರ್ಜಿಸಬೇಕು. ಪ್ರತಿನಿತ್ಯ 30-40 ನಿಮಿಷ ವೇಗವಾಗಿ ನಡೆಯುವುದು ಅಥವಾ ಈಜುವುದು ಒಳ್ಳೆಯದು. ಯೋಗಾಭ್ಯಾಸದಿಂದ ಹೃದಯಾಘಾತವನ್ನು ತಡೆಯಬಹುದೆನ್ನುವುದಕ್ಕೆ ದೃಢವಾದ ಆಧಾರಗಳಿಲ್ಲ (ಕೊಕ್ರೇನ್ ಡಾಟಾಬೇಸ್, 2014(5):ಸಿಡಿ0100722012 ಹಾಗೂ 2012(12)ಸಿಡಿ009506). ವಿಪರೀತ ಆಹಾರ, ಧೂಮಪಾನ, ಮದ್ಯಪಾನಗಳಿಲ್ಲದಂತೆ ಬಾಯಿ ಕಟ್ಟಿಕೊಂಡರೆ, ನಿತ್ಯವೂ ನಡೆದಾಡುತ್ತಿದ್ದರೆ ಹೃದಯಾಘಾತವನ್ನು ತಡೆಯಬಹುದು, ಯೋಗಾಭ್ಯಾಸದಿಂದಲ್ಲ.